ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿದರು. 
ಮಂಡ್ಯ

ಕೋಮು ಪ್ರಚೋದನೆಗೆ ಮುಂದಾದರೆ ಕ್ರಮ

ಶ್ರೀರಂಗಪಟ್ಟಣ: ಗೌರಿ-ಗಣೇಶ ಹಬ್ಬವನ್ನು ಕಾನೂನಿನ ಚೌಕಟ್ಟಿನಡಿ ಶಾಂತಿ ಹಾಗೂ ಸೌರ್ಹದತೆಯಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದೆ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮನವಿ ಮಾಡಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀರಂಗಪಟ್ಟಣ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಸಾರ್ವಜನಿಕರೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಭಾರತೀಯರು ಜಾತಿ, ಧರ್ಮ ಹಾಗೂ ವರ್ಗಗಳ ತೊರೆದು ಏಕತೆ ಮೂಡಿಸಲು ಆಚರಣೆಗೆ ಬಂದ ಹಬ್ಬವೇ ಗಣೇಶ ಚತುರ್ಥಿ. ಇಂತಹ ಹಬ್ಬವನ್ನು ನಾವು ಶಾಂತಿ, ಸೌರ್ಹದತೆ, ಅರ್ಥಪೂರ್ಣವಾಗಿ ಆಚರಿಸಬೇಕೆ ಹೊರತು ಯಾವುದೇ ಅಹಿತಕರ ಘಟನೆಗಳಿಂದ ಅದರ ಮಹತ್ವ ಹಾಳಾಗಲು ಬಿಡಬಾರದು ಎಂದು ಹೇಳಿದರು.
ಸ್ಥಳೀಯ ಆಡಳಿತ, ಸಂಬಂಧಿತ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ ಸಂಬಂಧಿಸಿದ ವ್ಯಕ್ತಿಗಳು ಜವಾಬ್ದಾರಿ ವಹಿಸಬೇಕು. ನಿಗದಿತ ದಿನದಂದು ನೀಡಿರುವ ಸಮಯದೊಳಗೆ ಸುರಕ್ಷಿತವಾಗಿ ವಿಸರ್ಜನೆ ಮಾಡಬೇಕು. ವಿಸರ್ಜನೆ ಮತ್ತು ಸಂಭ್ರಮಾಚರಣೆ ವೇಳೆ ಕಡ್ಡಾಯವಾಗಿ ಡಿ.ಜೆ.ಬಳಕೆ ರದ್ದು ಮಾಡಲಾಗಿದೆ. ರಾತ್ರಿ ವೇಳೆ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಧ್ವನಿ ವರ್ಧಕ ಬಳಕೆ, ಪಟಾಕಿ ಸಿಡಿಸುವುದು, ಮದ್ಯ ಸೇವಿಸಿ ಗುಂಪಾಗಿ ತಕರಾರು ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಸರ್ಜನೆ ವೇಳೆ ಸಿಸಿ ಕ್ಯಾಮರಾ ಕಣ್ಗಾವಲು ಸೇರಿದಂತೆ ಪೊಲೀಸರ ಗಸ್ತು ಇರಲಿದೆ. ಯಾವುದೇ ಕೋಮಿನವರು ಕೋಮು ಪ್ರಚೋದನೆಗೆ ಮುಂದಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಘರ್ಷಕ್ಕೆ ಆಸ್ಪದ ನೀಡುವವರನ್ನು ಕಾನೂನು ಕ್ರಮಕ್ಕೆ ಒಳಪಡಿಸುತ್ತೇವೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಚೇತನಾ ಯಾದವ್, ಡಿವೈಎಸ್ಪಿ ಯು.ಡಿ.ಕೃಷ್ಣಕುಮಾರ್, ಕೆ.ಆರ್.ಸಾಗರ ವೃತ್ತ ನೀರಿಕ್ಷಕ ವಿವೇಕಾನಂದ, ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಗ್ರಾಮಾಂತರ ಠಾಣೆ ಆನಂದ್ ಕುಮಾರ್, ಕ್ಯಾತನಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಲಿಂಗರಾಜು, ಪಾಂಡವಪುರ ಠಾಣೆ ಇನ್‌ಸ್ಪೆಕ್ಟರ್ ಶರತ್ ಕುಮಾರ್, ಪಿಎಸ್‌ಐಗಳಾದ ಜಗದೀಶ್, ರವಿಕುಮಾರ್, ಜಾನಬಾಯಿ ಕಡಪೆಟ್ಟಿ, ರಕ್ಷಿತಾ ಉಪಸ್ಥಿತರಿದ್ದರು.