ಪಾಂಡವಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಇತರರು ಇದ್ದರು.  
ಮಂಡ್ಯ

ನಿವೇಶನರಹಿತರಿಗೆ ಸೈಟ್ ಹಂಚಿಕೆ ಮಾಡಲು ಕ್ರಮ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ
ಪಾಂಡವಪುರ : ಪಟ್ಟಣದ ನಿವೇಶನರಹಿತ ಅರ್ಹ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಮಾನದಂಡಗಳ ಅನುಸಾರ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಡಳಿತಾಕಾರಿಯೂ ಆದ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ನಿಜವಾದ ಬಡವರು ಮತ್ತು ನಿವೇಶನ ರಹಿತರಿಗೆ ಪಟ್ಟಣದ ಹಾರೋಹಳ್ಳಿ ಸಮೀಪ 178 ನಿವೇಶನಗಳನ್ನು ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳಿಂದ ಈಗಾಗಲೇ ಅನುಮತಿ ಪಡೆದುಕೊಳ್ಳಲಾಗಿದೆ. ಅದರಂತೆ ನಿವೇಶನ ರಹಿತರಿಂದ ಅರ್ಜಿಗಳನ್ನು ಅಹ್ವಾನಿಸಿ ಮಾನದಂಡಗಳ ಅನುಸಾರ ನಿವೇಶನ ಹಂಚಿಕೆ ಮಾಡಲಾಗುವುದು. ನಿವೇಶನ ಹಂಚಿಕೆಗೂ ಮುನ್ನ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯತ್ ದೀಪ ಸೇರಿದಂತೆ ಇತರ ಮೂಲಸೌಕರ್ಯ ಒದಗಿಸಲಾಗುವುದು. ಪಟ್ಟಣದ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸೇರಿರುವ ಜಮೀನು ಹಾಗೂ ಒತ್ತುವರಿಯಾಗಿರರುವ ಗೋಮಾಳಗಳನ್ನು ಗುರುತಿಸಿ ಅದನ್ನು ನಿವೇಶನಗಳಾಗಿ ಪರಿವರ್ತಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದು ಇನ್ನೂ ಹೆಚ್ಚಿನ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪಟ್ಟಣ ವ್ಯಾಪ್ತಿಯಲ್ಲಿರುವ ಕಂದಾಯ ಇಲಾಖೆಗೆ ಸೇರಿರುವ ಜಮೀನು ಗುರುತಿಸುವಂತೆ ಸೂಚಿಸಿದರು.
ಕೆ.ಎಸ್.ಪುಟ್ಟಣ್ಣಯ್ಯ ಅವರ ಶಾಸಕರಾಗಿದ್ದಾಗ ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಐಟಿಐ ಕಾಲೇಜು ಹಿಂಭಾಗ 30 ಎಕರೆ ಜಾಗ ಗುರುತಿಸಿ ಪುರಸಭೆಗೆ ಹಸ್ತಾಂತರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂಬ ಮಾಹಿತಿ ಇದೆ. ಈ ಬಗೆ ಕೂಡ ಗಮನಹರಿಸಲಾಗುವುದು. ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆಗಾಗಿ ನಿವೇಶನ ಕಳೆದುಕೊಂಡಿರುವ ಮೂವರಿಗೆ ನಿವೇಶನ ಹಂಚಿಕೆ ಮಾಡಬೇಕಿದ್ದು, ಹಂಚಿಕೆ ಸಂದರ್ಭದಲ್ಲಿ ಇವರಿಗೂ ನಿವೇಶನ ನೀಡಲಾಗುವುದು. ಪಟ್ಟಣದಲ್ಲಿ ಈಗಿರುವ ಕ್ರೀಡಾಂಗಣ ಸುತ್ತ ಮನೆಗಳಿದ್ದು, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ದೊಡ್ಡ ಮಟ್ಟದ ಕ್ರೀಡೆಗಳಿಗೆ ಇಲ್ಲಿ ಅನನುಕೂಲ ಇರುವುದರಿಂದ ಪಟ್ಟಣದ ಹೊರವಲಯದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಜಮೀನು ಗುರುತಿಸಲಾಗಿದೆ. ಜತೆಗೆ 5 ಎಕರೆ ಪ್ರದೇಶದಲ್ಲಿ ಕಲಾಮಂದಿರ ಹಾಗೂ ಒಂದು ಎಕರೆ ಪ್ರದೇಶದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲಾಗುವುದು ಎಂದು ಹೇಳಿದರು.
ಪಾಂಡವಪುರ ನಿರ್ಮಾಣಕ್ಕಾಗಿ ಗಣನೀಯವಾಗಿ ಸೇವೆ ಸಲ್ಲಿಸಿದ್ದ ಮಹನೀಯರ ವ್ಯಕ್ತಿಗಳ ಹೆಸರನ್ನು ಪಟ್ಟಣದ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಭಿವೃದ್ಧಿ ಕಾಣದ ರಸ್ತೆಗಳನ್ನು ಗುರುತಿಸಿ ಅಂದಾಜು ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಸಂತೆಮೈದಾನವನ್ನು 70 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನೀಲಿನಕ್ಷೆ ತಯಾರಿಸಲಾಗಿದೆ. ಇದಕ್ಕಾಗಿ ಕೆಯುಐಡಿಎಫ್‌ಸಿಯಲ್ಲಿ ಸಾಲ ಶೇ.70ರಷ್ಟು ಸಾಲ ನೀಡಲಿದೆ. ಉಳಿದ ಶೇ30 ರಷ್ಟು ಹಣವನ್ನು ಪುರಸಭೆ ವತಿಯಿಂದ ಭರಿಸಬೇಕೋ, ಸರ್ಕಾರದಿಂದ ಅನುದಾನ ತರಬಹುದೆ ಅಥವಾ ಪುರಸಭೆ ಆಸ್ತಿ ಮೇಲೆ ಸಾಲ ಪಡೆಯಬಹುದೆ ಎಂಬುದರ ಬಗ್ಗೆ ಚಿಂತಿಸಲಾಗುತ್ತಿದೆ. ಜತೆಗೆ ಪುರಸಭೆಗೆ ಸೇರಿದ ವಾಣೀಜ್ಯ ಮಳಿಗೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಇದೇ ವೇಳೆ ಪುರಸಭಾ ವ್ಯಾಪ್ತಿಯಲ್ಲಿನ ಬೀರಶೆಟ್ಟಹಳ್ಳಿ ಗ್ರಾಮದ ಸರ್ವೇ ನಂ.2.32 ಗುಂಟೆ ಜಾಗವನ್ನು ಶಿಕ್ಷಣ ಇಲಾಖೆ ವರ್ಗಾಯಿಸಲು, ಪೌರಕಾರ್ಮಿಕ ಕಾಲನಿಯ 200*50 ಅಡಿ ನಿವೇಶನದಲ್ಲಿ ಪೌರಕಾರ್ಮಿಕರಿಗಾಗಿ ವಸತಿಗೃಹ ನಿರ್ಮಿಸುವುದು. 10ನೇ ಹಣಕಾಸು ಯೋಜನೆಯಡಿ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡುವುದು, ಹೊರ ಗುತ್ತಿಗೆ ನೌಕರರನ್ನು ಮುಂದುವರಿಸುವುದು ಸೇರಿದಂತೆ ಇತರ ವಿಚಾರಗಳನ್ನು ಚರ್ಚಿಸಿ ರೆಕಾರ್ಡ್ ಮಾಡಲಾಯಿತು.
ಪುರಸಭೆ ನಾಮನಿರ್ದೇಶಿತ ಸದಸ್ಯ ಮುರಳೀಧರ್ ಮಾತನಾಡಿ, ಪುರಸಭೆ ಅಧಿಕಾರಿಗಳು ನಾಮಿನಿ ಸದಸ್ಯರಿಗೆ ಗೌರವ ನೀಡುತ್ತಿಲ್ಲ. ನಿಮಗೆ ಸೀಮಿತವಾದ ಅಧಿಕಾರ ಇದೆ ಎನ್ನುತ್ತಾರೆ. ನಾವು ಸರ್ಕಾರದ ಪ್ರತಿನಿಧಿಗಳಾಗಿ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದೇವೆ ಎಂಬ ಅರಿವು ಕೂಡ ಇವರಿಗೆ ಇಲ್ಲ ಎಂದ ಅವರು, ಪುರಸಭೆಗೆ ಸೇರಿದ ಆಸ್ತಿಗಳ ವಿವರ ನೀಡಬೇಕು. ಪುರಸಭೆ ಆಸ್ತಿಗಳ ಮೇಲೆ ನ್ಯಾಯಾಲಯದಲ್ಲಿರುವ ಪ್ರಕಣಗಳು ಎಷ್ಟು, ಆ ಪ್ರಕರಣಗಳು ಯಾವ ಹಂತದಲ್ಲಿದೆ. ಎಷ್ಟು ಪ್ರಕರಣಗಳಲ್ಲಿ ಪುರಸಭೆ ಪರವಾಗಿ ಬಂದಿದೆ. ಪುರಸಭೆ ಆಸ್ತ ಒತ್ತುವರಿ ಆಗಿದ್ದೀಯೇ ಇತ್ಯಾದಿ ಮಾಹಿತಿಗಳನ್ನು ಒದಗಿಸುವಂತೆ ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಸದಸ್ಯರಾದ ಹಾರೋಹಳ್ಳಿ ರಮೇಶ್, ಲಕ್ಷ್ಮೇಗೌಡ, ಹನೀಫ್, ಸೋಮಶೇಖರ್, ಇಂಜಿನಿಯರ್‌ಗಳಾದ ಯಶಶ್ವಿನಿ, ಚೌಡಪ್ಪ, ವ್ಯವಸ್ಥಾಪಕಿ ಮಂಜುಳಾ, ಸಿಬ್ಬಂದಿ ನಾಗೇಶ್, ಮಹೇಶ್, ನರಸಿಂಹ, ಮಣಿ ಪ್ರಸಾದ್, ಸಂತೋಷ್ ಇತರರು ಇದ್ದರು.