ಚನ್ನಪಟ್ಟಣ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರನ್ನು ಸನ್ಮಾನಿಸಲಾಯಿತು. ಎನ್.ಎಂ.ಪುಟ್ಟಸ್ವಾಮಿ, ರವಿ, ಅನುರಾಧಾ, ಮಹಾದೇವ ಇದ್ದರು.
ಹಲಗೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಿರಿ ಎಂದು ಶಿಕ್ಷಕ ಎನ್.ಎಂ.ಪುಟ್ಟಸ್ವಾಮಿ ಸಲಹೆ ನೀಡಿದರು.
ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 8ನೇ ತರಗತಿಯ ವಿದ್ಯಾರ್ಥಿಗಳ ಪಾಲಕರ ಸಭೆ, ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಕೆಪಿಎಸ್ ಶಾಲೆಗೆ ದೂರದ ಊರುಗಳಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುತ್ತಿದ್ದಾರೆ. ಕಳೆದ ಬಾರಿ ಶೇ.100 ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಶಾಲೆಗೆ, ಪಾಲಕರಿಗೆ ಕೀರ್ತಿ ತರುವಂತೆ ಸಾಧನೆ ಮಾಡಿ ಎಂದು ಹೇಳಿದರು.
ಉಪನ್ಯಾಸಕ ರವಿ ಮಾತನಾಡಿ, ಕಡಿಮೆ ಅಂಕ ಗಳಿಸಿದೆ ಎಂದು ಯಾರೂ ದುಡುಕಬೇಡಿ. ದುಶ್ಚಟಗಳಿಗೆ ಬಲಿಯಾಗದೆ ವ್ಯಾಸಂಗದ ಕಡೆ ಹೆಚ್ಚು ಗಮನ ಹರಿಸಿ ಸಾಧನೆ ಮಾಡಿ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಸೋಮಣ್ಣ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗ ತೆರೆಯಲಾಗಿದೆ. ವಿದ್ಯಾರ್ಥಿಗಳನ್ನು ನಮ್ಮ ಕಾಲೇಜಿಗೆ ಸೇರಿಸಲು ಪಾಲಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉಪ ಪ್ರಾಂಶುಪಾಲರಾದ ಅನುರಾಧಾ, ಎಸ್‌ಡಿಎಂಸಿ ಉಪಾಧ್ಯಕ್ಷ ಮಹಾದೇವ, ವಿವೇಕ್, ಕಿರಣ್, ಭರತ್ ರಾಜ್ ಇದ್ದರು.