ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಹಾಗೂ ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಸಮ ಸಮಾಜ ನಿರ್ಮಾಣ ಕುರಿತ ಒಂದು ದಿನದ ವಿಚಾರಗೋಷ್ಠಿಯನ್ನು ಕಾರ್ಯಕ್ರಮವನ್ನು ನ್ಯಾಯಾಧೀಶ ಆನಂದ್ ಉದ್ಘಾಟಿಸಿದರು. ಡಾ.ಲೋಕೇಶ್, ಶ್ರೀನಿವಾಸ್, ಉಮಾ, ನಾಗರತ್ನಾ, ಯಶವಂತಕುಮಾರ್, ಸಂತೋಷ್ ಇದ್ದರು.
ಮಳವಳ್ಳಿ: ಸಂವಿಧಾನ ಜಾರಿಗೆ ಬಂದು 78 ವರ್ಷಗಳೇ ಕಳೆಯುತ್ತಿದ್ದರೂ ಇಂದಿಗೂ ಅಸ್ಪೃಶ್ಯತೆ, ದೌರ್ಜನ್ಯ, ಸಾಮಾಜಿಕ ಬಹಿಷ್ಕಾರದಂತಹ ಅಮಾನುಷ ಘಟನೆಗಳು ನಡೆಯುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ ಎಂದು ಜಿಲ್ಲಾ ಕಾನೂಜು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಆನಂದ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಹಾಗೂ ಅಸ್ಪಶ್ಯತೆ ನಿರ್ಮೂಲನೆ ಹಾಗೂ ಸಮ ಸಮಾಜ ನಿರ್ಮಾಣ ಕುರಿತ ಒಂದು ದಿನದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಸರ್ವಶ್ರೇಷ್ಠ ಸಂವಿಧಾನವನ್ನು ಭಾರತ ಹೊಂದಿದೆ ಆದರೂ ಅದನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸದಿರುವ ಪರಿಣಾಮವಾಗಿ ಈಗಲೂ ಜಾತೀಯತೆ ಅಸಮಾನತೆ, ದೌರ್ಜನ್ಯ ಪ್ರಕರಣಗಳು ತಾಂಡವವಾಡುತ್ತಿದ್ದು, ಇದನ್ನು ಸಂಪೂರ್ಣವಾಗಿ ತೊಲಗಿಸಿ ಸಮ ಸಮಾಜ ನಿರ್ಮಾಣಕ್ಕೆ ಇಡೀ ಸಮುದಾಯ ಮುಂದಾಗಬೇಕು ಎಂದು ಕರೆ ನೀಡಿದರು.
ಮಕ್ಕಳ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಶಿಕ್ಷಣದ ಜತೆಗೆ ಅಸ್ಪಶ್ಯತೆ ಆಧುನಿಕತೆಯ ರೂಪ ಪಡೆದುಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಡಿವೈಎಸ್ಪಿ ಯಶವಂತ್‌ಕುಮಾರ್ ಮಾತನಾಡಿ, ಇಷ್ಟೆಲ್ಲ ಕಾನೂನು ಕಟ್ಟಳೆಗಳ ಜಾರಿ ನಡುವೆ ಹೋಟೆಲ್, ದೇವಾಲಯ ಪ್ರವೇಶ ನಿರಾಕರಣೆ, ಇಷ್ಟಪಟ್ಟು ಮದುವೆಯಾಗಲು ನಿರ್ಬಂಧದಂತಹ ಘಟನೆಗಳು ಸಮಾಜಕ್ಕೆ ಶಾಪವಾಗಿದ್ದು, ಯಾವುದೇ ದೌರ್ಜನ್ಯ ಘಟನೆ ಸಂಭವಿಸಿದಲ್ಲಿ ಧೈರ್ಯವಾಗಿ ಪೊಲೀಸ್ ಇಲಾಖೆಗೆ ದೂರು ನೀಡುವ ಮೂಲಕ ನ್ಯಾಯ ದೊರಕಿಸಿಕೊಳ್ಳಲು ಮುಂದಾಗುವಂತೆ ಕರೆ ನೀಡಿದರು.
ತಹಸೀಲ್ದಾರ್ ಡಾ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಶ್ರೀನಿವಾಸ್, ಬಿಇಒ ಉಮಾ, ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ದೌರ್ಜನ್ಯ ಸಮಿತಿ ಸದಸ್ಯರಾದ ಮಾರ್ಕಾಲು ಮಾದು, ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್ ಸೇರಿದಂತೆ ಇತರರು ಇದ್ದರು.