ಮಂಡ್ಯ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮಾಹಿತಿ ಪಡೆಯುತ್ತಿರುವ ಪೊಲೀಸರು.
- ನ್ಯಾಯಾಲಯದಲ್ಲಿ ಆತಂಕದ ವಾತಾವರಣ
ಮಂಡ್ಯ: ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಮತ್ತೊಮ್ಮೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಗುರುವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಎಂದಿನಂತೆ ನ್ಯಾಯಾಲಯದ ಕಲಾಪಗಳು ಆರಂಭಗೊಂಡವು. ಸ್ವಲ್ಪ ಹೊತ್ತಿನಲ್ಲೇ ಇ-ಮೇಲ್ ಮೂಲಕ ಬಂದ ಬೆದರಿಕೆ ಮಾಹಿತಿ ಬಂದಿದೆ. ಇದರಿಂದ ವಕೀಲರು ಮತ್ತು ಕಕ್ಷಿದಾರರು ಆತಂಕಕ್ಕೆ ಒಳಗಾದರು. ಕಳೆದ ಫೆ.16ರಂದು ಕೂಡ ಇದೇ ರೀತಿ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಕಲಾಪಗಳನ್ನು ಸ್ಥಗಿತಗೊಳಿಸದೆ ಯಥಾಪ್ರಕಾರ ಮುಂದುವರಿಸಲಾಯಿತು.
ಇತ್ತ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನ್ಯಾಯಾಲಯದ ಆವರಣದಲ್ಲಿ ಶೋಧ ಕಾರ್ಯ ನಡೆಸಿದರು. ನಂತರ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಿಬ್ಬಂದಿಯೂ ನ್ಯಾಯಾಲಯದ ಕೊಠಡಿ ಮತ್ತು ಆವರಣದ ಎಲ್ಲೆಡೆ ಪರಿಶೀಲಿಸಿದರು. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ.
ಮಂಡ್ಯ ನ್ಯಾಯಾಲಯ ಸಂಕೀರ್ಣದಲ್ಲಿ ಒಟ್ಟು 16 ನ್ಯಾಯಾಲಯಗಳಿದ್ದು, ನಿತ್ಯ ಸಾವಿರಾರು ಕಕ್ಷಿದಾರರು ಮತ್ತು ವಕೀಲರು ಬರುತ್ತಾರೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಪ್ರಕರಣಗಳು ವಿಚಾರಣಾ ಹಂತದಲ್ಲಿರುತ್ತವೆ. ಹೀಗಾಗಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಬೇಕು. ಪೊಲೀಸ್ ಹೊರಠಾಣೆ ತೆರೆದು ಕಣ್ಗಾವಲು ಹೆಚ್ಚಿಸಬೇಕು ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್.ಸತ್ಯಾನಂದ ಒತ್ತಾಯಿಸಿದ್ದಾರೆ.