ಕಿಕ್ಕೇರಿ ಸಮೀಪದ ಮಂದಗೆರೆಯ ಹೇಮಾವತಿ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿ ನಟ ಮಧು ಲ್ಯಾಪ್‌ಟಾಪ್, ಪ್ರಿಂಟರ್ ಕೊಡುಗೆಯಾಗಿ ಶನಿವಾರ ನೀಡಿದರು. ವಾಣಿ, ಚಂದ್ರಶೇಖರ್, ಮುರುಳಿ, ಲಲಿತಾಬಾಯಿ, ಶೇಖರ್ ಮತ್ತಿತರರಿದ್ದರು.
ಕಿಕ್ಕೇರಿ: ಕನ್ನಡ ಶಾಲೆ, ಅನುದಾನಿತ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ ಬೇಕಿದೆ ಎಂದು ಚಲನಚಿತ್ರ ನಟ ಮಧು ತಿಳಿಸಿದರು.
ಸಮೀಪದ ಮಂದಗೆರೆಯ ಅನುದಾನಿತ ಹೇಮಾವತಿ ಪ್ರೌಢಶಾಲೆಗೆ ಲ್ಯಾಪ್‌ಟಾಪ್, ಪ್ರಿಂಟರ್ ಅನ್ನು ಶನಿವಾರ ಕೊಡುಗೆಯಾಗಿ ವಿತರಿಸಿದ ಬಳಿಕ ಮಾತನಾಡಿದ ಅವರು, ಕನ್ನಡ ಶಾಲೆ, ಸರ್ಕಾರಿ ಶಾಲೆ ಒಂದೊಂದಾಗಿ ಮುಚ್ಚುತ್ತಿವೆ. ಪೋಷಕರಲ್ಲಿನ ಖಾಸಗಿ ಹಾಗೂ ಇಂಗ್ಲಿಷ್ ವ್ಯಾಮೋಹ ಇದಕ್ಕೆ ಕಾರಣವಾಗಿದೆ. ನಾನೂ ಸಹ ಈ ಶಾಲೆಯಲ್ಲಿಯೇ ಓದಿದ್ದು, ಕನ್ನಡ ಶಾಲೆಯಲ್ಲಿ ಓದಿ ಉತ್ತಮ ಭವಿಷ್ಯ ಕಟ್ಟಿಕೊಂಡಿರುವೆ ಎಂದರು.
ಓದು, ಉನ್ನತ ಹುದ್ದೆಗೆ ಬೇಕಿರುವುದು ಮಾಧ್ಯಮ ಅಲ್ಲ. ಉನ್ನತ ಹುದ್ದೆಯಲ್ಲಿರುವವರು ಮಾತೃಭಾಷೆ ಶಿಕ್ಷಣದಲ್ಲಿ ಓದಿದವರು ಎಂಬುದನ್ನು ಮರೆಯಬಾರದು ಎಂದರು.
ಬಿ.ಎಲ್.ವೇಣು ಕಾದಂಬರಿ ಆಧರಿತ ದನಗಳು ಚಲನಚಿತ್ರದಲ್ಲಿ ನಾಯಕ ನಟನಾಗಿ ಮಧು ಅಭಿನಯಿಸಿದ್ದು, ಚಲನಚಿತ್ರವನ್ನು ಎಲ್‌ಇಡಿ ಪರದೆ ಮೂಲಕ ಪ್ರದರ್ಶನ ಏರ್ಪಡಿಸಲಾಗಿತ್ತು. ನಟ ಮಧು, ವಾಣಿ ಅವರನ್ನು ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷ ಜಿ.ವಿ. ಚಂದ್ರಶೇಖರ್, ಮುರುಳಿ, ವಾಣಿ, ತುಳಸಿರಾಜ್, ಶೇಖರ್, ಮುಕುಂದಸ್ವಾಮಿ, ರೋಹಿತ್, ಭುವನಾ, ಲಲಿತಾಬಾಯಿ, ಗಗನಾ, ಪಲ್ಲವಿ ಮತ್ತಿತರರಿದ್ದರು.