ಆದಿಚುಂಚನಗಿರಿ ವಿವಿ ಕುಲಪತಿ ಡಾ.ಶ್ರೀಧರ, ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ, ಮೌಲ್ಯಮಾಪನ ಕುಲಸಚಿವ ಡಾ.ನಾಗರಾಜ್, ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಬಿ.ರಮೇಶ್, ಡಾ. ಕೆ.ಎಸ್.ಗಂಗಾಧರ, ಡಾ. ಎ.ಟಿ.ಶಿವರಾಮು, ಡಾ. ಬಿ.ಎಂ.ಶೋಭಾ, ಡಾ. ಎಂ.ಜಗದೀಶ್, ಡಾ. ಪ್ರಶಾಂತ್ ಕಾಳಪ್ಪ, ಡಾ. ಎಚ್.ಕೋಮಲ, ವಿವಿ ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್ ಉಪಸ್ಥಿತರಿದ್ದರು.
ವಿದ್ಯೆ, ಯಶಸ್ಸು, ಬಲ ಮತ್ತು ಜ್ಞಾನವನ್ನು ಪಡೆದಿರುವ ವ್ಯಕ್ತಿ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಬಲ್ಲ ಸಾಮರ್ಥ್ಯವಂತನಾಗುತ್ತಾನೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ವಿವಿ ಆವರಣದ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆರನೇ ಘಟಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿದ್ಯಾರ್ಥಿಯ ಹಾಗೂ ಸಾಧಕನ ಮೊದಲ ಹೆಜ್ಜೆಯೇ ತಂದೆ-ತಾಯಿ, ಗುರುಗಳು ಹಾಗೂ ಸಮಾಜವನ್ನು ಗೌರವಿಸುವುದಾಗಿದೆ. ಪ್ರತಿಯೊಬ್ಬರೂ ನಾಲ್ಕು ಅಂಶಗಳನ್ನು ಪಾಲಿಸಲೇಬೇಕಾಗಿದೆ. ಅವು ವಿದ್ಯೆ, ಯಶಸ್ಸು, ಬಲ ಮತ್ತು ಜ್ಞಾನ. ವಿದ್ಯೆ ಕೇವಲ ಲೌಕಿಕ ಜ್ಞಾನವಲ್ಲ, ಬದಲಿಗೆ ಮುಕ್ತಿಯನ್ನು ಪಡೆಯಲು ನಿಜವಾದ ಸಾಧನ. ಜ್ಞಾನ ಯಶಸ್ಸುಗಳನ್ನು ಅಡಿಪಾಯವಾಗಿಟ್ಟುಕೊಂಡರೆ ಯಶಸ್ಸು ಸಿಗುತ್ತದೆ. ಆತ್ಮವಿಶ್ವಾಸವೆಂಬುದು ಆಂತರಿಕ ಧೈರ್ಯ ನಿಮ್ಮ ಬಲವನ್ನು ಹೆಚ್ಚಿಸುತ್ತದೆ. ಇವುಗಳು ಉದಾತ್ತ ಚಿಂತನೆ ಮತ್ತು ಅಭ್ಯುದಯದ ಮೆಟ್ಟಿಲಾಗಿವೆ ಎಂದರು.
ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಮಾತನಾಡಿ, ನಾನು ಬಹು ಸಮಯವನ್ನು ನ್ಯಾಯಾಲಯದಲ್ಲಿ ಕಳೆದು, ಸಾಕ್ಷಿಗಳನ್ನು ಪರಿಶೀಲಿಸಿ, ವಾದಗಳನ್ನು ಪರೀಕ್ಷಿಸಿ ಅಂತಿಮವಾಗಿ ಒಂದೇ ಉತ್ತರ ಹುಡುಕುವ ವ್ಯಕ್ತಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಆ ಉತ್ತರವು ನೀವು ಪಡೆಯುವ ಪದವಿಗಿಂತ ಬಹುದೊಡ್ಡದು. ಈ ಸಂಸ್ಥೆಯು ಕೇವಲ ಉಪನ್ಯಾಸ ಕೊಠಡಿಯ ಕಲ್ಪನೆಯಲ್ಲಿ ಪ್ರಾರಂಭವಾಗಿಲ್ಲ. ಆಧ್ಯಾತ್ಮಿಕ ಪರಂಪರೆಯ ವಿಶಿಷ್ಟ ಸಂಕಲ್ಪದಿಂದ ಆರಂಭಗೊಂಡಿದೆ. ಆದರೆ ಇತ್ತೀಚಿನ ಪ್ರಗತಿಯ ಪ್ರತಿರೂಪವೇ ಕುಲಾಧಿಪತಿಗಳ ಮಾರ್ಗದರ್ಶನವಾಗಿದೆ. ಇಲ್ಲಿ 8,000 ವಿದ್ಯಾರ್ಥಿಗಳು 760 ಅಧ್ಯಾಪಕರಿಂದ ಶಿಕ್ಷಣ ಪಡೆಯುತ್ತಿದ್ದಾರೆ ಎಂಬುದೇ ಗಮನಾರ್ಹವಾಗಿದೆ ಎಂದರು.
ವೈದ್ಯಕೀಯ, ಫಾರ್ಮಸಿ, ಇಂಜಿನಿಯರಿಂಗ್, ನೈಸರ್ಗಿಕ ವಿಜ್ಞಾನ, ಪರಿಸರ, ಸಮಾಜ ವಿಜ್ಞಾನ ಹೀಗೆ ಹಲವು ವಿಭಾಗಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ವಿಶಿಷ್ಟ ವೇದಿಕೆಯಲ್ಲಿ ಪದವಿ ಪಡೆದಿರುವ ನೀವು ಬದ್ಧತೆಯಲ್ಲಿ ದೃಢವಾಗಿರಿ ಮತ್ತು ತಾಳ್ಮೆಯಿಂದಿರಿ. ನಿಮ್ಮಿಂದ ಕೇವಲ ಉದ್ದೇಶವನ್ನು ಮಾತ್ರ ಕೇಳುವುದಿಲ್ಲ, ದೃಢ ನಂಬಿಕೆ ಮತ್ತು ಬದ್ಧತೆಯನ್ನು ನಿರೀಕ್ಷಿಸುತ್ತೇವೆ ಎಂದರು.
ಬೆಂಗಳೂರಿನ ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ನಾಗಹನುಮಯ್ಯ ಮಾತನಾಡಿ, ಘಟಿಕೋತ್ಸವವು ಕೇವಲ ಪದವಿ ಸ್ವೀಕಾರದ ಸಮಾರಂಭವಲ್ಲ. ಹಲವು ವರ್ಷಗಳ ಕಲಿಕೆ, ಪರಿಶ್ರಮ, ಬೆಳವಣಿಗೆಯ ಮಹತ್ವದ ಘಟ್ಟವಾಗಿದೆ ಎಂದರು.
ಘಟಿಕೋತ್ಸವದಲ್ಲಿ ಸಂಶೋಧಕರಿಗೆ 31 ಡಾಕ್ಟರೇಟ್ ಪದವಿ, 31 ಚಿನ್ನದ ಪದಕ, 161 ರ‌್ಯಾಂಕ್ ವಿಜೇತರು, ವೈದ್ಯಕೀಯ, ಇಂಜಿನಿಯರಿಂಗ್, ಔಷಧ ವಿಜ್ಞಾನ, ಬಿ.ಇಡಿ, ನಸಿರ್ಂಗ್ ಸೇರಿದಂತೆ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಒಟ್ಟು ,1841 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.