ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಮೈದಾನದಲ್ಲಿ ಭಾನುವಾರ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡರ 80ನೇ ವರ್ಷದ ಹುಟ್ಟುಹಬ್ಬದ ಅಭಿನಂದನಾ ಕಾರ್ಯಕ್ರಮದಲ್ಲಿ 80 ಕೆ.ಜಿ. ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು. 
ಮಂಡ್ಯ

ತಪ್ಪು ತಿದ್ದಿಕೊಂಡು ಮುನ್ನಡೆಯುವವನೇ ಮನುಜ

ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ

ಎಲ್ಲರ ಜೀವನದಲ್ಲೂ ಸಿಟ್ಟು, ಕೋಪ, ತಪ್ಪುಗಳು ಸಹಜ. ಆದರೆ ಆ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವವನೇ ಮನುಜ ಧರ್ಮ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭಾವುಕರಾಗಿ ನುಡಿದರು.

ತಾಲೂಕಿನ ಅರಕೆರೆ ಗ್ರಾಮದ ಮೈದಾನದಲ್ಲಿ ಭಾನುವಾರ ಅಭಿಮಾನಿಗಳು ಆಯೋಜಿಸಿದ್ದ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ ಅವರ 80ನೇ ವರ್ಷದ ಹುಟ್ಟುಹಬ್ಬದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಕುಟುಂಬಕ್ಕೆ ಈ ಕ್ಷೇತ್ರದ ಜನತೆ 8 ಬಾರಿ ಜನಪ್ರತಿನಿಧಿಯಾಗಿ ಸೇವೆ ಮಾಡುವ ಅವಕಾಶ ನೀಡಿ ಆಶೀರ್ವದಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ನೀಡುವಂತೆ ಪ್ರೇರೇಪಿಸಿದ್ದೀರಿ. ಈ ನಿಮ್ಮ ಸೇವೆಯಲ್ಲಿ ನಮ್ಮಿಂದ ಯಾವುದೇ ಲೋಪಗಳಾಗಿರಬಹುದು. ತಪ್ಪು ಒಪ್ಪುಗಳಾದಾಗ ಪ್ರತಿರೋಧಿಸಿರುವುದನ್ನು ಒಪ್ಪಿಕೊಳ್ಳುತ್ತೇನೆ.
ನನ್ನ ತಂದೆ ಬಂಡಿಸಿದ್ದೇಗೌಡರು ಸಾಮಾನ್ಯ ರೈತ ಕುಟುಂಬ ಹಿನ್ನಲೆಯಿಂದ ಬಂದವರು. 1986ರಲ್ಲಿ ಅವರ ಅಕಾಲಿಕವಾಗಿ ಮರಣ ಆಗಿದ್ದನ್ನು ನೆನೆದಾಗ ಕಣ್ಣಂಚು ಒದ್ದೆಯಾಗುತ್ತವೆ. ಅಂತಹ ಕಷ್ಟಕಾಲದಲ್ಲಿ ನಮ್ಮ ಕುಟುಂಬವನ್ನು ಕೈ ಹಿಡಿದ ಈ ಕ್ಷೇತ್ರದ ಜನತೆಗೆ ನಾವು ಚಿರಋಣಿ. ಭಾರತ ಸ್ವಾತಂತ್ರ್ಯಗೊಂಡ 1947ರ ಆ.15ರಂದೇ ಜನಿಸಿದ ನನ್ನ ತಾಯಿ ವಿಜಯಲಕ್ಷ್ಮಮ್ಮ ಅವರಿಗೆ ಈಗ 80 ವರ್ಷ. ಈ ವಿಶೇಷ ಸಂದರ್ಭದಲ್ಲಿ ಅವರ ಜನ್ಮದಿನಾಚರಣೆ ಜತೆಗೆ ಸಮಾಜಮುಖಿ ಕಾರ್ಯಕ್ರಮಕ್ಕೆ ಮಾಡಲು ನಿರ್ಧರಿಸಿ ನಡೆಸಲಾಗುತ್ತಿದೆ. ಎ.ಎಸ್.ಬಂಡಿಸಿದ್ದೇಗೌಡರ ಪ್ರತಿಷ್ಠಾನದ ವತಿಯಿಂದ 32 ಮಹಿಳಾ ಒಕ್ಕೂಟಗಳಿಗೆ ಆರ್ಥಿಕ ನೆರವು ವಿತರಿಸಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಡಾ.ಎಂ.ಪುಟ್ಟೇಗೌಡ ಮಾತನಾಡಿ, ಎ.ಎಸ್.ಬಂಡಿಸಿದ್ದೇಗೌಡರು ಬಂದಿಖಾನೆ ಸಚಿವರಾಗಿದ್ದರು. ಪತಿ ರಾಜ್ಯದ ಮಂತ್ರಿಯಾಗಿದ್ದರೂ ವಿಜಯಲಕ್ಷ್ಮಮ್ಮ ತಮ್ಮ ಹಳೆಯ ಮನೆಯ ಮುಂದೆ ಗೊಬ್ಬಳಿ ಸೌದೆಯನ್ನು ಕಡಿಯುತ್ತಿದ್ದರು ಎಂದರೆ ಅವರ ಸರಳ ಜೀವನವನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು ಎಂದು ಸ್ಮರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಬಿಸಿಲು ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿವಿಧ ಜನಪದ ಕಲಾ ತಂಡಗಳೊಂದಿಗೆ ತೆರೆದ ವಾಹನದಲ್ಲಿ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಅವರನ್ನು ಗ್ರಾಮದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಬಳಿಕ 80 ಕೆ.ಜಿ.ತೂಕದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರಿಗೆ ಬಾಡೂಟದ ಭೋಜನ ಬಡಿಸಲಾಯಿತು.
ಮನ್‌ಮುಲ್ ನಿರ್ದೇಶಕ ಬಿ.ಬೋರೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ತಡಗವಾಡಿ ಯತೀಶ್, ಸುಮತಿ ರಮೇಶ ಬಂಡಿಸಿದ್ದೇಗೌಡ, ಜ್ಯೋತಿ, ಹರ್ಷ ಬಂಡಿಸಿದ್ದೇಗೌಡ, ತಾಪಂ ಮಾಜಿ ಸದಸ್ಯ ಸಂತೋಷ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಗೋವಿಂದೇಗೌಡ, ಅರಕೆರೆ ಶಶಾಂಕ್, ಸೂನಗಹಳ್ಳಿ ಸುರೇಶ್, ಮನ್ವಂತ್, ವಡಿಯಾಂಡಹಳ್ಳಿ ಉದಯ್, ರುದ್ರಪ್ಪ, ಕೊಡಿಯಾಲ ಕಾಮರಾಜ್ ಸೇರಿದಂತೆ ಅಭಿಮಾನಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಕ್ಷ ತೊರೆಯುವ ಸುಳಿವು ನೀಡಿದ ಶಾಸಕರು:

ಶ್ರೀರಂಗಪಟ್ಟಣ: ಹುಟ್ಟೂರು ಅರೆಕೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಭಾವುಕ ನುಡಿಗಳಾಡಿ ಮಾರ್ಮಿಕ ಸಂದೇಶ ನೀಡಿದರು.

ಎಲ್ಲವೂ ಸಿಕ್ತು, ಆದ್ರೆ ನಾನು ಆಸೆ ಪಟ್ಟಿದ್ದು ನನಗೆ ಸಿಗಲಿಲ್ಲ. ಅದೆನೋ ಗೊತ್ತಿಲ್ಲ, ನಾನು ಆಸೆ ಪಟ್ಟಿದ್ದು ನನಗೆ ಏನೂ ಸಿಗಲ್ಲ. ಈ ಹಿಂದೆ ನಮ್ಮ ಕುಟುಂಬ ಒಂದೇ ಪಕ್ಷದಲ್ಲಿತ್ತು. ಈಗ 10 ವರ್ಷದಿಂದ ನಾನು ಬೇರೆ ಪಕ್ಷದಲ್ಲಿದ್ದೇನೆ. ನಮ್ಮ ತಂದೆಯವರಿದ್ದ ಮೂಲ ಪಕ್ಷದಲ್ಲಿ ಇದ್ದೇನೆ. ಮುಂದೆ ಎಲ್ಲಿರ್ತೇನೆ? ಏನಾಗ್ತೇನೋ? ಎಂಬುದು ಗೊತ್ತಿಲ್ಲ ಎಂದು ಭಾವನಾತ್ಮಕ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಪಕ್ಷ ತೊರೆಯುವ ಸುಳಿವು ನೀಡಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದು, ಈ ಬಾರಿ ಸಚಿವರಾಗಿ ಸಿಎಂ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟ ಸೇರುವ ಆಗಾಧ ಆಸೆ ಹೊಂದಿದ್ದರು. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಪಕ್ಷ ಈಗ ಬಿಡ್ತಾರಾ ಎಂಬುದಕ್ಕೆ ಶಾಸಕರು ಸಭೆಯಲ್ಲಿ ಕಣ್ಣೀರು ಹಾಕುವ ಜತೆಗೆ ಭಾವಾನಾತ್ಮಕ ನುಡಿಗಳಾಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.