ಮಂಡ್ಯದ ಕುವೆಂಪುನಗರದ ನಿವಾಸಿ ಸಂಘಟಕ ಕಾರಸವಾಡಿ ಮಹಾದೇವ ಅವರ ನಿವಾಸದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಆಯೋಜಿಸಲಾಗಿತ್ತು.
- ನಗರದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ
- ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿಯಿಂದ ಆಯೋಜನೆ
ಮಂಡ್ಯ: ಪುಕ್ಕಟ್ಟೆ ಕೊಟ್ಟ ಪುಸ್ತಕಗಳು ಓದಿಸಿಕೊಳ್ಳುವುದಿಲ್ಲ. ಓದುಗರೊಂದಿಗೆ ಬೆಸೆಯುವುದಿಲ್ಲ. ಕೊಂಡು ಓದುವ ಸಂಸ್ಕೃತಿ ಬೆಳೆಸಲು ಓದುಗರಿಗಾಗಿ ನಾಲ್ಕು ವಲಯಗಳಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಪುಸ್ತಕ ಸಂಸ್ಕೃತಿ ಬೆಳೆಯಲು ಓದುಗರೂ ಮುಖ್ಯ ಎಂಬುದನ್ನು ಈ ಮೂಲಕ ಸಾರಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.
ಇಲ್ಲಿನ ಕುವೆಂಪುನಗರದ ನಿವಾಸಿ ಸಂಘಟಕ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕಾರಸವಾಡಿ ಮಹಾದೇವ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುವಂತೆ ಗಳಿಸಿದ ಎರಡು ರೂಪಾಯಿಯಲ್ಲಿ ಒಂದು ರೂಪಾಯಿಯನ್ನು ಅನ್ನಕ್ಕೆ, ಮತ್ತೊಂದು ರೂಪಾಯಿಯನ್ನು ಪುಸ್ತಕ ಖರೀದಿಗೆ ಮೀಸಲಿಡಬೇಕು. ಅದು ಬದುಕಿಗೆ ಬೆಳಕಾಗುವುದು ಎಂದರು.
ಎಲ್ಲ ಕ್ಷೇತ್ರಗಳಂತೆ ಅರಿವಿನ ಲೋಕದ ರಥಕ್ಕೆ ಎರಡು ಚಕ್ರಗಳು. ಒಂದು ಸಾಹಿತ್ಯ ರಚಿಸುವ ಲೇಖಕರಾದರೆ ಮತ್ತೊಂದು ಚಕ್ರ ಓದುಗರು. ಓದುಗರೆಂಬ ಚಕ್ರವನ್ನು ಕಡೆಗಣಿಸಿರುವುದರಿಂದ ಅಕ್ಷರ ಲೋಕದ ಮಹಾ ಪಯಣ ಸಾಗುತ್ತಿಲ್ಲ. ಬದುಕುವ ಮತ್ತು ಎದುರಿಸುವ ಕಲೆಯನ್ನು ಶಿಕ್ಷಕರು ಹಾಗೂ ಪಾಲಕರು ಕಲಿಸುವುದಿಲ್ಲ. ಅವರು ಬೇರೆಲ್ಲ ನೀಡುತ್ತಾರೆ. ಯಾರು ಕೊಡಲಾಗದ್ದನ್ನು ಪುಸ್ತಕಗಳು ನೀಡುತ್ತವೆ. ಈ ಹಿನ್ನೆಲೆಯಲ್ಲಿ ಪುಸ್ತಕಗಳು, ಅದರ ಲೇಖಕರು, ಹಾಗೆಯೇ ಓದುಗರು ಮುಖ್ಯ ಎನಿಸಿದಾಗ ಹುಟ್ಟಿಕೊಂಡಿದ್ದೆ ಮನೆಗೊಂದು ಗ್ರಂಥಾಲಯ ಪರಿಕಲ್ಪನೆ ಎಂದು ತಿಳಿಸಿದರು.
ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಮನೆಗೊಂದು ಗ್ರಂಥಾಲಯ ಆರಂಭಿಸುವುದು ಉತ್ತಮ ನಡೆ. ಜ್ಞಾನವೇ ಶಕ್ತಿ, ಆ ಶಕ್ತಿಯನ್ನು ಕೊಡುವುದು ಪುಸ್ತಕ. ಎಲ್ಲ ದೇಶಗಳ ಜ್ಞಾನವನ್ನು ಮನೆಯಲ್ಲೇ ಕೊಡುತ್ತದೆ ಗ್ರಂಥಾಲಯ. ದೇಹದೊಳಗಿನ ಆತ್ಮದಂತೆ ಗ್ರಂಥಾಲಯ. ಪುಸ್ತಕಗಳ ಓದು ಸಹೃದಯತೆಯನ್ನು ಹುಟ್ಟು ಹಾಕುತ್ತದೆ. ಈ ಕಾರ್ಯಕ್ರಮ ನಿಜಕ್ಕೂ ಉತ್ತಮವಾದದ್ದು. ಪ್ರತಿಯೊಬ್ಬರಿಗೂ ನಾನು ಮಾಡಬೇಕು ಎಂಬ ಆಸೆ ಮೂಡಿಸುತ್ತಿದೆ ಎಂದರು.
ನಿವೃತ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, ಪುಸ್ತಕ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಮೂರನೇ ವರ್ಷದಲ್ಲಿ ಕಲಿತಿದ್ದು ನೂರು ವರ್ಷ ಬಾಳಿಸುತ್ತದೆ. ಪುಸ್ತಕಗಳು ಅಂಬೇಡ್ಕರ್ ಅವರನ್ನು ವಿಶ್ವಜ್ಞಾನಿಯನ್ನಾಗಿ ಮಾಡಿವೆ ಎಂದು ಹೇಳಿದರು.
ಉಪನ್ಯಾಸಕ ಮಂಚಶೆಟ್ಟಿ ಎಂ.ಕಡಿಲುವಾಗಿಲು ಅವರು ಮಂಕುತಿಮ್ಮನ ಕಗ್ಗ ಕುರಿತು ಮಾತನಾಡಿದರು. ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಕಾರಸವಾಡಿ ಮಹಾದೇವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಡಾ.ಎಂ.ಕೆಂಪಮ್ಮ, ಮಂಜು ಮುತ್ತೇಗೆರೆ, ಚಂದ್ರಶೇಖರ ದ.ಕೋ.ಹಳ್ಳಿ, ಶಿವಕುಮಾರ ಆರಾಧ್ಯ, ಉಮೇಶ ದಡಮಹಳ್ಳಿ, ಸದ್ದಾಂ ತಗ್ಗಹಳ್ಳಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರಸವಾಡಿ ಮಹಾದೇವ ಮತ್ತು ಹರಿಣಿ ದಂಪತಿಯನ್ನು ಸಮಿತಿ ವತಿಯಿಂದ ಅಭಿನಂದಿಸಲಾಯಿತು.