ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಏಡ್ಸ್ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್ ಚಾಲನೆ ನೀಡಿದರು. ವೈದ್ಯ ಡಾ.ಮುರಳೀಧರ, ರತಿ, ಮೇರಿ ಎಲಿಜಬೆತ್, ಮಂಜುನಾಥ್, ರೂಪೇಶ್ ಕುಮಾರ್, ಚೇತನ್, ಪೂರ್ಣಿಮಾ ಇದ್ದರು.  
ಮಂಡ್ಯ

ಆರೋಗ್ಯವಂತ ಜೀವನವೇ ನಿಜವಾದ ಸಿರಿತನ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್ ಅಭಿಮತ
  • ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಮಳವಳ್ಳಿ : ಪ್ರಸ್ತುತ ಸಮಾಜದಲ್ಲಿ ಆರೋಗ್ಯವಂತ ಬದುಕು ನಡೆಸುವವರೇ ಎಲ್ಲ ರೀತಿ ಸಿರಿವಂತರು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಯುವ ಜನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ ವತಿಯಿಂದ ವಿಶ್ವ ಏಡ್ಸ್ ದಿನ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚೆಗೆ ಆರ್ಥಿಕ ಶ್ರೀಮಂತಿಕೆಯಿಂದ ನೆಮ್ಮದಿಯ ಜೀವನ ಸಾಧ್ಯವಿಲ್ಲ. ಆರೋಗ್ಯವಂತ ಬದುಕಿನಲ್ಲಿ ಮಾತ್ರ ಕುಟುಂಬದ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ ಎಂದರು. ಯುವ ಪೀಳಿಗೆಯು ಅಕ್ರಮ ದೈಹಿಕ ಸಂಪರ್ಕಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ದುಡುಕಿನ ನಿರ್ಧಾರಗಳಿಂದ ನಿಮ್ಮ ಮುಂದಿನ ಸುಂದರ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ. ಏಡ್ಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಪಾರಾಗಲು ಪ್ರತಿಯೊಬ್ಬರೂ ಜಾಗೃತಿ ವಹಿಸುವ ಬಗ್ಗೆ ಸಲಹೆ ನೀಡಿದರು.
ಪಟ್ಟಣದ ವಿದ್ಯಾಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿದರು. ಪಟ್ಟಣದ ಅನಂತ್ ರಾಮ್ ವೃತ್ತ ಹಾಗೂ ಸಾರಿಗೆ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಎಚ್‌ಐವಿ ಹರಡುವ ಬಗ್ಗೆ ರೋಗ ಲಕ್ಷಣಗಳು ಹಾಗೂ ಔಷಧೋಪಚಾರ ಕುರಿತು ಮಾಹಿತಿ ನೀಡುವುದರ ಜತೆಗೆ ಏಡ್ಸ್ ಜಾಗೃತಿ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯ ಡಾ.ಮುರಳೀಧರ, ಆಪ್ತ ಸಮಾಲೋಚಕಿ ರತಿ, ನರ್ಸಿಂಗ್ ಅಧೀಕ್ಷಕಿ ಮೇರಿ ಎಲಿಜಬೆತ್, ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿಗಳಾದ ಮಂಜುನಾಥ್, ರೂಪೇಶ್ ಕುಮಾರ್, ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು ಉಪನ್ಯಾಸಕ ಚೇತನ್, ಪೂರ್ಣಿಮಾ ಹಾಗೂ ಸಾರ್ವಜನಿಕ ಆಸ್ಪತ್ರೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
3 ಎಂಎಲ್‌ವಿ 3
ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ವಿದ್ಯಾ ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಏಡ್ಸ್ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಜಾಥಾ ನಡೆಸಿದರು.