ಮಳವಳ್ಳಿ ತಾಲೂಕಿಗೆ ಆಗಮಿಸಿದ ಬಿಗ್‌ಬಾಸ್ ಶೋ ವಿಜೇತ ಗಿಲ್ಲಿನಟನನ್ನು ಮೆರವಣಿಗೆ ಮಾಡಲಾಯಿತು.
- ತವರಿಗೆ ಆಗಮಿಸಿದ ಬಿಗ್ ಬಾಸ್ ವಿಜೇತ ನಟ ಗಿಲ್ಲಿ
- ಮಳವಳ್ಳಿ ತಾಲೂಕಿನ ಜನರಿಂದ ಅದ್ಧೂರಿ ಸ್ವಾಗತ
- ತೆರೆದ ವಾಹನದಲ್ಲಿ ಮೆರವಣಿಗೆ
ಮಳವಳ್ಳಿ: ಬಿಗ್ ಬಾಸ್-12ನೇ ಆವೃತ್ತಿಯ ವಿಜೇತ ಗಿಲ್ಲಿ ನಟ(ನಟರಾಜ್) ಟ್ರೋಫಿಯೊಂದಿಗೆ ಮಳವಳ್ಳಿಗೆ ಆಗಮಿಸಿದ ಸಂದರ್ಭ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ತಾಲೂಕಿನ ಗಡಿಭಾಗದಿಂದ ನೆಲಮಾಕನಹಳ್ಳಿ ಗೇಟ್, ಟಿ.ಕಾಗೇಪುರ ಗೇಟ್ ಬಳಿಯೇ ಜನರು ಜಯ ಘೋಷಣೆಯೊಂದಿಗೆ ಸ್ವಾಗತಿಸಿದರು. ನಂತರ ಪಟ್ಟಣದ ಹೊರವಲಯದ ಡಾಬಾ ಬಳಿ ಗಿಲ್ಲಿ ಆಗಮಿಸುತ್ತಿದ್ದಂತೆಯೇ ಉದ್ಯಮಿ ರಾಜು ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಬರಮಾಡಿಕೊಳ್ಳಲಾಯಿತು.
ಪಟ್ಟಣದ ಹೊರ ಭಾಗದಲ್ಲಿರುವ ಶಕ್ತಿ ದೇವತೆ ದಂಡಿನಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಗ್ ಬಾಸ್ ಟ್ರೋಫಿಯೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣಕ್ಕೆ ಆಗಮಿಸಿದ ಗಿಲ್ಲಿಗೆ ಅನಂತ ವೃತ್ತದ ಬಳಿ ಬೃಹತ್ ಹೂವಿನ ಹಾರ ಹಾಕಿ, ಹೂವಿನ ಸುರಿಮಳೆ ಸುರಿಸಿದ ಸಹಸ್ರಾರು ಜನರು ಜಯಘೋಷ ಹಾಕಿದರು. ತಂಡೋಪತಂಡವಾಗಿ ಆಗಮಿಸಿದ ಯುವಕರು ಪಟಾಕಿ ಸಿಡಿಸಿ ಗಿಲ್ಲಿ ಆಗಮನವನ್ನು ಸಂಭ್ರಮಿಸಿದರು.
ದಂಡಿನ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತೆರದ ವಾಹನದಲ್ಲಿ ಮದ್ದೂರು-ಮಳವಳ್ಳಿಯಲ್ಲಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಸಾವಿರಾರು ಜನರು ಬೈಕ್ ರ‌್ಯಾಲಿಯಲ್ಲಿ ಸಾಗಿದರು. ತಾಲೂಕಿನ ದಡದ ಪುರದವರೆವಿಗೂ ರ‌್ಯಾಲಿ ಸಾಗಿತು.
ಸೆಲ್ಫಿಗೆ ಮುಗಿಬಿದ್ದ ಯುವತಿಯರು
ಗಿಲ್ಲಿ ನಟನೊಂದಿಗೆ ಫೋಟೋ, ಸೆಲ್ಫಿಗೆ ನೂರಾರು ಯುವತಿಯರು ಮುಗಿಬಿದ್ದರು. ಈ ಸಂದರ್ಭ ಪರಸ್ಪರ ಎಳೆದಾಡಿದರು. ಪೊಲೀಸರು ಯುವಜನರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು. ಗಿಲ್ಲಿ ನಟನನ್ನು ನೋಡಲು ಮೈಸೂರು, ಚಾಮರಾಜನಗರ, ಹನೂರು, ಕೊಳ್ಳೇಗಾಲ ಬನ್ನೂರು ಸೇರಿದಂತೆ ವಿವಿಧೆಡೆಯಿಂದ ಯುವಜನರ ದಂಡೇ ಆಗಮಿಸಿತ್ತು. ಪಟ್ಟಣದಲ್ಲಿ ಗಿಲ್ಲಿ ಅಭಿಮಾನಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಗಿಲ್ಲಿ ... ಗಿಲ್ಲಿ... ಎಂದು ಕೂಗಿ ಅಭಿಮಾನವನ್ನು ಮೆರೆದರು.
ಈಡುಗಾಯಿ ಒಡೆದು ಆರತಿ ಎತ್ತಿದರು
ಮಳವಳ್ಳಿ ಪಟ್ಟಣದಿಂದ ಸುಲ್ತಾನ್ ರಸ್ತೆಯ ಮೂಲಕ ನಟನ ಹುಟ್ಟೂರು ದಡದಪುರಕ್ಕೆ ಆಗಮಿಸುವ ಸಂದರ್ಭದಲ್ಲಿ ಪ್ರತಿ ಗ್ರಾಮದ ಗೇಟ್ ಬಳಿ ಗಿಲ್ಲಿಗೆ ಅಭಿಮಾನಿಗಳು ಆರತಿ ಎತ್ತಿ, ತಮಟೆ ವಾದ್ಯಗಳೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು. ಈಡುಗಾಯಿ ಒಡೆೆದಿದ್ದು ವಿಶೇಷವಾಗಿತ್ತು.
ರಿಯಾಲಿಟಿ ಶೋನಲ್ಲಿ ಗೆಲುವು ಸಾಧಿಸಿ ತಮ್ಮ ಊರಿಗೆ ಆಗಮಿಸುವ ಗಿಲ್ಲಿ ನಟನನ್ನು ನೋಡಲು ಯುವಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಹಾಗೂ ಡಿವೈಎಸ್ಪಿ ಯಶ್ವಂತಕುಮಾರ್ ನೇತೃತ್ವದಲ್ಲಿ ಪಟ್ಟಣ ಹಾಗೂ ದಡದಪುರ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದು ಗಮನ ಸೆಳೆಯಿತು. ನಿರೀಕ್ಷೆಗೂ ಮೀರಿ ಜನದಟ್ಟನೆ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಇಷ್ಟೊಂದು ಅಭಿಮಾನದಿಂದ ಸ್ವಾಗತಿಸಿ ನನ್ನನ್ನು ಬರಮಾಡಿಕೊಂಡಿದ್ದನ್ನು ಎಂದಿಗೂ ಮರೆಯುವುದಿಲ್ಲ. ನಿಮ್ಮೆಲ್ಲರ ಅಭಿಮಾನಕ್ಕೆ ಎಂದೆಂದಿಗೂ ನಾನು ಚಿರಋಣಿಯಾಗಿರುತ್ತೇನೆ.