ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರಿಗೆ ಪುನರ್ವಸು ಉತ್ಸವ ವೈಭವದಿಂದ ನೆರವೇರಿತು.
- ರಾಮಾನುಜರು ಮತ್ತು ಚೆಲುವನಾರಾಯಣ ಸ್ವಾಮಿ ದರ್ಶನ
- ಅರ್ಚಕ ವಿದ್ವಾನ್ ಆನಂದಾಳ್ವಾರ್ ಮುಂದಾಳತ್ವ
ಮೇಲುಕೋಟೆ: ರಾಮಾನುಜರ ಪುನರ್ವಸು ಉತ್ಸವ ಶನಿವಾರ ವೈಭವದಿಂದ ನೆರವೇರಿದ್ದು, ಸಹಸ್ರಾರು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡು ರಾಮಾನುಜರು ಮತ್ತು ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದರು.
ಅರ್ಚಕ ವಿದ್ವಾನ್ ಆನಂದಾಳ್ವಾರ್ ಮುಂದಾಳತ್ವದಲ್ಲಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಮುಂಜಾನೆ 5 ಗಂಟೆಗೆ ರಾಮಾನುಜಾಚಾರ್ಯರಿಗೆ ಅಭಿಷೇಕ ನೆರವೇರಿತು. ನಂತರ ಕಲ್ಯಾಣಿಯಲ್ಲಿ ವಿಶೇಷ ಪಾರಾಯಣಗಳು ನಡೆದು ಶ್ವೇತ ವಸ್ತ್ರಧಾರಣೆಯೊಂದಿಗೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ರಾಮಾನುಜರ ಉತ್ಸವ ವೈಭವದಿಂದ ನೆರವೇರಿತು. ಪಹಲ್ ಕಂಡೆನ್ ನಾರಣನೆ ಕಂಡೆನ್ ಮಂತ್ರವನ್ನು ಪಾರಾಯಣ ಮಾಡಿದ ಬಳಿಕ ಚೆಲುವನಾರಾಯಣಸ್ವಾಮಿಗೆ ಮೊದಲ ಮಹಾ ಮಹಾಮಂಗಳಾರತಿ ನೆರವೇರಿತು. ವಿಶೇಷ ನಾದಸ್ವರವಾದನ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ನಡೆದ ರಾಮಾನುಜಾಚಾರ್ಯರ ತಿರುವೀದಿ ಉತ್ಸವ ಮೇಲುಕೋಟೆಯಲ್ಲಿ ದೈವಿಕ ವಾತಾವರಣ ಸೃಷ್ಟಿಸಿತ್ತು.
ವಂಗಿಪುರಂ ನಂಬಿ ತಿರುಮಾಳಿಗೆಯಲ್ಲಿ ನೂರಾರು ತಟ್ಟೆಗಳಲ್ಲಿ ಜೋಡಿಸಿದ್ದ ಹಣ್ಣು ಹಾಗೂ ಹೂವಿನ ತಟ್ಟೆಗಳನ್ನು ಇಳೆಯಾಳ್ವಾರ್, ಭಾ.ವಂ.ರಾಮಪ್ರಿಯ, ಪಾರ್ಥಸಾರಥಿ, ಯಾಮುನಾಚಾರ್ಯರು ನೂರಾರು ಶಿಷ್ಯರೊಂದಿಗೆ ಸೇರಿ ಭವ್ಯ ಮೆರವಣಿಗೆಯಲ್ಲಿ ದೇವಾಲಯಕ್ಕೆ ತಂದು ತಿರುನಾರಾಯಣ ಮತ್ತು ರಾಮಾನುಜರಿಗೆ ಸಮರ್ಪಿಸಿದರು.
ಸ್ವಾಮಿಗೆ ನೈವೇದ್ಯ ವಿಶೇಷ ಪೂಜೆ ಆದ ನಂತರ ಭಕ್ತರಿಗೆ ಅಡಕೆ ಪಟ್ಟೆಯಲ್ಲಿ ಕದಂಬ,ಮೊಸರನ್ನ ಹಾಗೂ ರಸಾಯನವನ್ನು ಪ್ರಸಾದ ರೂಪವಾಗಿ ನೀಡಲಾಯಿತು. ದೇವಾಲಯದ ನವರಂಗ, ಆಚಾರ್ಯ ರಾಮಾನುಜರ ಸನ್ನಿಧಿಯ ಆವರಣವನ್ನು ತಳಿರು ತೋರಣ, ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ರಾತ್ರಿ ರಾಮಾನುಜರ ಉತ್ಸವ ಸ್ವಸ್ಥಾನಕ್ಕೆ ಮರಳುವ ಮೂಲಕ ಪುನರ್ವಸು ಉತ್ಸವ ಸಂಪನ್ನವಾಯಿತು. ದೇವಾಲಯದ ಇಒ ಶೀಲಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.