ನಗರದ ಟೌನ್ ಕ್ಲಬ್ ಕಚೇರಿ ಆವರಣದಲ್ಲಿ ಸಂಘಟನೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಶ್ರೀ ಶಿವಕುಮಾರಸ್ವಾಮೀಜಿಗಳ ಭಾವಚಿತ್ರಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂಜಯ್ಯ ಹಾಗೂ ಗಣ್ಯರು ಪುಷ್ಪನಮನ ಸಲ್ಲಿಸಿದರು. ಬಿ.ವಿ.ಮಂಜುನಾಥ್, ಪ್ರೊ.ಬಿ.ಕೃಷ್ಣ, ಶಂಕರಯ್ಯ, ವಿ,ಟಿ.ರವಿಕುಮಾರ್, ಎಲ್.ಮಹಾಲಿಂಗಯ್ಯ ಇದ್ದರು. 
ಮಂಡ್ಯ

ಶ್ರೀಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ

ಮದ್ದೂರು: ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಹಾಗೂ ಟೌನ್ ಕ್ಲಬ್ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮ ಬುಧವಾರ ಜರುಗಿತು.
ನಗರದ ಟೌನ್ ಕ್ಲಬ್ ಕಚೇರಿ ಆವರಣದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂಜಯ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಪುಷ್ಪನಮನ ಸಲ್ಲಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂಜಯ್ಯ ಮಾತನಾಡಿ, ಸಮಾಜದ ಸ್ವಾಸ್ಥ್ಯ ಉತ್ತಮವಾಗಿರಲು ಸಂಸ್ಕಾರ ಅತಿ ಮಹತ್ವದಾಗಿದ್ದು, ಅದರಂತೆಯೇ ಶ್ರೀಗಳು ಆರೋಗ್ಯ, ಶಿಕ್ಷಣ ಮತ್ತು ಅನ್ನದಾಸೋಹ ನಡೆಸುವ ಮೂಲಕ ಎಲ್ಲ ವರ್ಗದ ಮಕ್ಕಳ ಹೊಟ್ಟೆ ತುಂಬಿಸುವ ಮೂಲಕ ಜ್ಞಾನ ದಾಹವನ್ನು ಧಾರೆ ಎರೆದಿದ್ದಾರೆಂದು ಹೇಳಿದರು.
ಆದಿಚುಂಚನಗಿರಿ, ಸುತ್ತೂರು ಮಠ ಹಾಗೂ ಸಿದ್ಧಗಂಗಾ ಮಠ ಸೇರಿದಂತೆ ಕೆಂಗೇರಿ ವಿಶ್ವ ಒಕ್ಕಲಿಗರ ಮಠ ನಾಲ್ಕು ಮಠಗಳು ಸಮಾಜದ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸುವ ಜತೆಗೆ ರೈತಾಪಿ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಅಕ್ಷರ ದಾಸೋಹವನ್ನು ಉಣಬಡಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸುತ್ತಿವೆ ಎಂದು ಬಣ್ಣಿಸಿದರು.
ಸಿದ್ಧಗಂಗಾ ಶ್ರೀಗಳು ವಿದೇಶದಲ್ಲೂ ತಮ್ಮ ಛಾಪು ಮೂಡಿಸಿದ್ದು, ಶ್ರೀಗಳು ನಡೆದಾಡುವ ದೇವರಾಗಿ ಮಠದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಂಸ್ಕಾರ, ಆಚಾರ, ವಿಚಾರ, ನಡೆ, ನುಡಿಯನ್ನು ಕಲಿಸುವ ಮೂಲಕ ಸನ್ಮಾರ್ಗದತ್ತ ಹೆಜ್ಜೆಯಿಡಲು ಅವಿರತವಾಗಿ ಶ್ರಮಿಸಿದ ಮಹಾನ್ ಮೇರು ವ್ಯಕ್ತಿತ್ವದ ವ್ಯಕ್ತಿಯೆಂದರು.
ನಿವೃತ್ತ ಮುಖ್ಯ ಶಿಕ್ಷಕ ಬಿ.ವಿ.ಮಂಜುನಾಥ ಮಾತನಾಡಿ, ಶ್ರೀಗಳು ವಿವಿಧ ದಾಸೋಹಿಗಳಾಗಿ ಮಠದ ಪೀಠಾಧಿಪತಿಗಳಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ, ವಸತಿ ಹಾಗೂ ಜ್ಞಾನವನ್ನು ನೀಡಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಹಲವು ವರ್ಷಗಳ ಕಾಲ ಮಠವನ್ನು ಮುನ್ನಡೆಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆಂದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಪೂಜ್ಯರು ನೀಡಿದ ಪ್ರಾಮುಖ್ಯ ಮತ್ತು ಅವರ ಸಾಮಾಜಿಕ ಸೇವೆ ಸದಾ ಚಿರಸ್ಮರಣೀಯ. ಅಸಂಖ್ಯಾತ ಜನಮಾನಸದಲ್ಲಿ ಅಮರರಾಗಿರುವ ಶ್ರೀಗಳು ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಎಲ್ಲ ವರ್ಗದ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿಯೆಂದರು.
ಅಭಿನಂದನೆ: ಜೀವವಿಮಾ ಮಾರ್ಗದರ್ಶಕ ಮತ್ತು ಅಂಚೆ ಇಲಾಖೆ ಪ್ರತಿನಿಧಿ ವೀರಣ್ಣ ಅವರನ್ನು ಬಳಗದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ.ಬಿ.ಕೃಷ್ಣ, ಉಪಾಧ್ಯಕ್ಷ ಶಂಕರಯ್ಯ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಟಿ.ರವಿಕುಮಾರ್, ಭಾ.ವಿ.ಪ ಅಧ್ಯಕ್ಷ ಎಲ್.ಮಹಾಲಿಂಗಯ್ಯ, ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀಕಂಠಯ್ಯ, ಕಾರ್ಯದರ್ಶಿ ಎನ್.ಸಿ.ಶಿವಲಿಂಗಯ್ಯ, ಪದಾಧಿಕಾರಿಗಳಾದ ದೊರೆಸ್ವಾಮಿ, ಸಿ.ಕೆ.ರಾಮಕೃಷ್ಣ, ಚನ್ನಯ್ಯ, ಎಂ.ಎ.ಕೃಷ್ಣ, ಎನ್.ಎಸ್.ಚಂದ್ರು, ರಾಧಾ, ಎಚ್.ಪಿ.ಸ್ವಾಮಿ, ಡಿ.ನಳಿನಿ ಇತರರಿದ್ದರು.