ತಾಲೂಕಿನ ಹಳೆ ಕಿರಂಗೂರು ಸಮೀಪದ ಕೆಂಗಾಲ್‌ಕೊಪ್ಪಲು ಗ್ರಾಮ ಸಂಪರ್ಕಿಸುವ ರಸ್ತೆಮಾರ್ಗದ ಪಕ್ಕದ ಆಲೆಮನೆಯೊಂದರಲ್ಲಿದ್ದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಗುಜರಿಯೇ ಧಗಧನೆ ಹೊತ್ತಿ ಉರಿದು ಸುಟ್ಟು ಭಸ್ಮವಾಗಿದ್ದು, ಅಗ್ನೀಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸುತ್ತಿರುವ ದೃಶ್ಯ. 
ಮಂಡ್ಯ

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಅವಘಢ

ಪ್ರಮುಖ ಮುಖ್ಯಾಂಶಗಳು

  • ಹಳೆಕಿರಂಗೂರು ಸಮೀಪದ ಕೆಂಗಾಲ್‌ಕೊಪ್ಪಲು ಗ್ರಾಮದಲ್ಲಿ ಘಟನೆ
ಶ್ರೀರಂಗಪಟ್ಟಣ: ತಾಲೂಕಿನ ಹಳೆಕಿರಂಗೂರು ಸಮೀಪದ ಕೆಂಗಾಲ್‌ಕೊಪ್ಪಲು ಗ್ರಾಮ ಸಂಪರ್ಕಿಸುವ ಮಾರ್ಗದ ಪಕ್ಕದ ಆಲೆಮನೆಯೊಂದರಲ್ಲಿದ್ದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಗುಜರಿ ಸುಟ್ಟು ಭಸ್ಮವಾಗಿದೆ.
ತಾಲೂಕಿನ ದರಸಗುಪ್ಪೆ ಗ್ರಾಮದ ಕೆಂಪೇಗೌಡ ಅವರ ಆಲೆಮನೆಯನ್ನು ವ್ಯಕ್ತಿಯೊಬ್ಬರಿಗೆ ಗುಜರಿ ಘಟಕ ನಡೆಸಲು ಬಾಡಿಗೆ ನೀಡಿದ್ದರು ಎನ್ನಲಾಗಿದೆ. ಸಾರ್ವಜನಿಕ ವಸತಿ ಪ್ರದೇಶಕ್ಕೆ ಸಮೀಪದ ಕೃಷಿ ಭೂಮಿಯಲ್ಲಿರುವ ಈ ಆಲೆಮನೆಯಲ್ಲಿ ಹಲವಾರು ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಘಟಕ ನಡೆಸುತ್ತಿರುವ ಈ ಮುಸ್ಲಿಂ ವ್ಯಕ್ತಿಗೆ ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿದಂತೆ ಹೊರರಾಜ್ಯದ ಮೆಡಿಕಲ್ ವೇಸ್ಟೇಜ್‌ಗಳನ್ನು ಸಹ ಅಕ್ರಮವಾಗಿ ಸಂಗ್ರಹಿಸಿ ವಿಲೇವಾರಿ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.
ಈ ನಡುವೆ ಗುರುವಾರ ಮಧ್ಯಾಹ್ನದ ವೇಳೆ ತ್ಯಾಜ್ಯ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಲೆ ಎಲ್ಲೆಡೆ ಹಬ್ಬಿದ್ದು ಬೆಂಕಿಯ ಜ್ವಾಲೆ ಹೊತ್ತಿ ಧಗಧಗನೆ ಉರಿದಿದ್ದು, ತ್ಯಾಜ್ಯ ಘಟಕದಲ್ಲಿದ್ದ ಕೆಲ ಯಂತ್ರಗಳು ಸೇರಿದಂತೆ ಸಂಪೂರ್ಣ ಆಲೆಮನೆ ಸುಟ್ಟುಕರಕಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸತತ 4 ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.