- ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಪಾಂಡವಪುರ: ತಾಲೂಕಿನ ಸೀತಾಪುರ ಗ್ರಾಮದಲ್ಲಿ ಸಾಲಗಾರರ ಕಾಟ ತಾಳಲಾರದೆ ರೈತರೊಬ್ಬರು ಜಮೀನಿನಲ್ಲಿ ಭಾನುವಾರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಲಿಂಗರಾಜು (48) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತರಿಗೆ ಪತ್ನಿ , ಒಬ್ಬ ಪುತ್ರಿ, ಪುತ್ರ ಇದ್ದಾರೆ. ಮೃತ ಲಿಂಗರಾಜುಗೆ 1 ಎಕರೆ ಜಮೀನು ಇದ್ದು, ಮಗಳ ಮದುವೆಗೆಂದು ಖಾಸಗಿಯಾಗಿ 8 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 6 ಗಂಟೆ ಸಮಯದಲ್ಲಿ ಜಮೀನಿಗೆ ನೀರು ಹಾಯಿಸುವುದಾಗಿ ಹೇಳಿ ಹೋದವರು ರಾತ್ರಿ 9 ಗಂಟೆಯಾದರೂ ಮನೆಗೆ ಬರಲಿಲ್ಲ. ಇದರಿಂದ ಗಾಬರಿಗೊಂಡ ಮಗ ಮಹದೇವು ಹುಡುಕಿಕೊಂಡು ಹೋದಾಗ, ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಮೃತ ಲಿಂಗರಾಜು ಅವರ ಪತ್ನಿ ಭಾರತಿ ಅವರು ಕ್ಯಾತನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.