ಕೇಶವ(11) 
ಮಂಡ್ಯ

ಕೆರೆಯಲ್ಲಿ ಈಜಲು ಹೋದ ಬಾಲಕ ಸಾವು

ಮಳವಳ್ಳಿ: ಪಟ್ಟಣದ ಮದ್ದೂರು-ಮಳವಳ್ಳಿ ದೊಡ್ಡ ಕೆರೆಯಲ್ಲಿ ಶನಿವಾರ ಈಜಲು ಹೋಗಿ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಪಟ್ಟಣದ ಗಂಗಾಮತ ಬಡಾವಣೆಯ ನಿವಾಸಿ ಬಸಂತ್ ಕುಮಾರ್ ಅವರ ಪುತ್ರ ಕೇಶವ(11) ಮೃತ. ಈತ ಗಂಗಾಮತ ಬಡಾವಣೆ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಾಲೆ ಸಮಯ ಮುಗಿಸಿ ಸ್ನೇಹಿತರ ಜತೆ ದೊಡ್ಡಕೆರೆಗೆ ಈಜಲು ಹೋದಾಗ ಅವಘಡ ಸಂಭವಿಸಿದೆ. ಪಟ್ಟಣಕ್ಕೆ ಹೊಂದಿಕೊಂಡತೆ ಇರುವ ಕೆರೆಯಲ್ಲಿ ಆರು ಬಾಲಕರು ಈಜಲು ಇಳಿದ್ದಿದ್ದಾರೆ. ಇವರ ಪೈಕಿ ಇಬ್ಬರು ಆಳ ಇರುವ ಕಡೆ ಈಜಿಕೊಂಡು ಹೋಗಿ ಹೊರಬರಲಾಗದೆ ಪರಿತಪಿಸುತ್ತಿದ್ದು, ಕೆರೆ ತಟದಲ್ಲಿದ್ದ ಉಳಿದ ಬಾಲಕರು ಗಾಬರಿಯಿಂದ ಸಮೀಪದಲ್ಲಿದ್ದ ಸ್ಥಳೀಯರಿಗೆ ತಿಳಿಸಿದ್ದಾರೆ. ಕೂಡಲೇ ಕೆರೆಗೆ ಬಾಲಕರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಾಗಲೇ ಕೇಶವ ಮೃತಪಟ್ಟಿದ್ದ. ಮತ್ತೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪಾಲಕರಿಗೆ ಬಾಲಕನ ಮೃತದೇಹವನ್ನು ಒಪ್ಪಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.