ಮಂಡ್ಯ: ನಗರದ ಪೇಟೆಬೀದಿಯಲ್ಲಿರುವ ಜೈನ ಶ್ವೇತಾಂಬರ ಸಭಾಭವನದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 100ಕ್ಕೂ ಹೆಚ್ಚು ಯೂನಿಟ್ ರಕ್ತಸಂಗ್ರಹಿಸಲಾಯಿತು.
ರಕ್ತದಾನ ಮಹಾದಾನ ಎಂಬ ಆಶಯದೊಂದಿಗೆ ತೇರಾಪಂಥ್ ಯುವಕರ ಪರಿಷತ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಇಂಡಿಯಾ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಹಲವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಸಂಗ್ರಹಿಸಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಹಸ್ತಾಂತರ ಮಾಡಲಾಯಿತು.
ತೇರಾಪಂಥ್ ಯುವಕರ ಪರಿಷತ್ ಉಪಾಧ್ಯಕ್ಷ ಪ್ರವೀಣ್‌ಕುಮಾರ್ ಮಾತನಾಡಿ, ರಕ್ತದಾನವೇ ಕರ್ತವ್ಯ ಎಂಬ ಧ್ಯೇಯದೊಂದಿಗೆ ಶಿಬಿರವನ್ನು ಆಯೋಜಿಸಲಾಗಿದೆ. 2014ರಿಂದ ಪ್ರತಿ ವರ್ಷವೂ ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಕಾರ್ಯಕ್ಕೆ ಜಿಲ್ಲೆಯ ಜನತೆಯಿಂದ ಉತ್ತಮ ಸಹಕಾರ ದೊರೆಯುತ್ತಿದೆ. 2023ರಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 407 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ದಾಖಲೆಯ ಸಾಧನೆ ಮಾಡಲಾಗಿತ್ತು. ನಾವು ನೀಡುವ ರಕ್ತ ಮತ್ತೊಬ್ಬರ ಜೀವ ಉಳಿಸಬಹುದು. ಆದ್ದರಿಂದ ಪ್ರತಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪರಿಷತ್ ಅಧ್ಯಕ್ಷ ನೇಮಿಚಂದ್ರ, ಪ್ರವೀಣ್ ಜೈನ್, ನವೀನ್ ಜೈನ್, ಸುರೇಶ್ ಜಿ.ಬನ್ಸಾಲಿ, ವಿನೋದ್ ಬನ್ಸಾಲಿ, ಕಮಲಾಜಿ ಬುರಾಡ್, ಕಮಲೇಶ್ ಗೋಕೃ, ರಾಕೇಶ್ ಬನ್ಸಾಲಿ, ವಿಕಾಸ್ ಬನ್ಸಾಲಿ, ರೋಹಿತ್ ಕೊಠಾರಿ, ಚಿರಗೋಕರು, ಮದನ್‌ಲಾಲ್ ಜೈನ್ ಮೂರ್ತಿ, ಪ್ರಕಾಶ್, ಡಾ.ಉತ್ತಮ್ ಚಂದ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ವ್ಯವಸ್ಥಾಪಕಿ ಸುಹಾಸಿನಿ ಮುನ್ನಿಪಲ್ಲಿ, ಮುಖ್ಯ ವ್ಯವಸ್ಥಾಪಕ ವೀರಭದ್ರ ಕುಮಾರ್, ಸುಂದರೇಶ್ ಹಾಜರಿದ್ದರು.