ಮದ್ದೂರು ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಕುರಿಗಳು ಬಲಿಯಾಗಿರುವುದು. 
ಮಂಡ್ಯ

ಚಿರತೆ ದಾಳಿಗೆ 7 ಕುರಿಗಳು ಬಲಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಮಾದನಾಯಕನಹಳ್ಳಿ ಗ್ರಾಮದಲ್ಲಿ ದಾಳಿ
ಮದ್ದೂರು: ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಚಿರತೆ ದಾಳಿಗೆ 7 ಕುರಿಗಳು ಬಲಿಯಾಗಿವೆ.
ಗ್ರಾಮದ ಪವಿತ್ರಾ ಹಾಗೂ ಗುಂಡ ದಂಪತಿಯ ಕುರಿಗಳನ್ನು ಗ್ರಾಮ ಹೊರ ವಲಯದಲ್ಲಿದ್ದ ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿತ್ತು. ಶುಕ್ರವಾರ ರಾತ್ರಿ ದಾಳಿ ನಡೆಸಿರುವ ಚಿರತೆ 5 ಕುರಿಗಳನ್ನು ಅಲ್ಲಿಯೇ ಸಾಯಿಸಿ, ಇನ್ನೆರಡು ಕುರಿಗಳನ್ನು ಎಳೆದೊಯ್ದಿದೆ. ಕೊಟ್ಟಿಗೆಯ ಸುತ್ತ ದೊಡ್ಡ ಕಾಂಪೌಂಡ್ ಹಾಕಿದ್ದರೂ ಚಿರತೆ ಕಾಂಪೌಂಡ್ ಹಾರಿ ಬಂದಿದೆ. ಸುಮಾರು 1.50 ಲಕ್ಷ ರೂ. ನಷ್ಟ ಉಂಟಾಗಿದ್ದು ಸರ್ಕಾರ ಸೂಕ್ತ ಪರಿಹಾರ ಕೊಡಿಸುವಂತೆ ದಂಪತಿ ಮನವಿ ಮಾಡಿದ್ದಾರೆ.
ಮಾದನಾಯಕನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಉಪಟಳ ಹೆಚ್ಚಾಗಿರುವ ಕಾರಣ ರಾತ್ರಿ ವೇಳೆಯಲ್ಲಿ ರೈತರು ಜಮೀನುಗಳ ಬಳಿ ಹೋಗಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ ಹಾಗೂ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಆದರೂ ಚಿರತೆ ಹಾವಳಿ ನಿಯಂತ್ರಿಸಲು ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಶೀಘ್ರದಲ್ಲಿ ಚಿರತೆ ಉಪಟಳ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಂಡು ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕೆಂದು ರೈತ ಮುಖಂಡ ದೇವರಾಜು ಆಗ್ರಹಿಸಿದ್ದಾರೆ.