ಪಾಂಡವಪುರ ತಾಲೂಕಿನ ಕೆ.ಹೊಸೂರು ಬಳಿ ವಿದ್ಯುತ್ ಉತ್ಪಾದನಾ ಉಪ ಕೇಂದ್ರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಕೆ.ರವಿಕುಮಾರ್, ವೈ.ಪಿ.ಮಂಜುನಾಥ್, ಟಿ.ಎಸ್.ಹಾಳಯ್ಯ, ವೆಂಕಟೇಶ್ ಮೊದಲಿಯಾರ್ ಇತರರು ಇದ್ದರು.
ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ರೈತಾಪಿ ಜನರ ಕೃಷಿ ಪಂಪ್‌ಸೆಟ್‌ಗಳು, ಕುಡಿಯುವ ನೀರಿನ ಯೋಜನೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಹೊಸದಾಗಿ 5 ವಿತರಣಾ ಘಟಕಗಳ ಜತೆಗೆ 2 ಸೋಲಾರ್ ವಿದ್ಯುತ್ ಉತ್ಪಾದನಾ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ ನೀಡಿದರು.
ತಾಲೂಕಿನ ಕೆ.ಹೊಸೂರು ಗ್ರಾಮದ ಬಳಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ 20.37 ಕೋಟಿ ರೂ. ವೆಚ್ಚದ 66/11 ಕೆ.ವಿ.ವಿದ್ಯುತ್ ವಿತರಣಾ ಉಪ ಕೇಂದ್ರದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮೂಡಲಕೊಪ್ಪಲು, ಬೇಬಿ, ದುದ್ದ, ಹಟ್ನ ಗ್ರಾಮದ ಬಳಿ ವಿದ್ಯುತ್ ವಿತರಣಾ ಘಟಕಗಳನ್ನು ಸ್ಥಾಪಿಸಲು ಚಾಲನೆ ನೀಡಲಾಗಿದೆ. ಅಂತೆಯೇ ಈಗ ಕೆ.ಹೊಸೂರು ಗ್ರಾಮದ ಬಳಿ ಕೂಡ ಘಟಕ ಸ್ಥಾಪಿಸಲು ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ಘಟಕದ ನಿರ್ಮಾಣದಿಂದ ಕೆ.ಹೊಸೂರು ಕೆರೆತೊಣ್ಣೂರು, ಬಳಅತ್ತಿಗುಪ್ಪೆ, ಕೆಂಚನಹಳ್ಳಿ ನೀಲನಹಳ್ಳಿ, ಬೀರನಹಳ್ಳಿ, ಇಂಗಲಗುಪ್ಪೆ ಮತ್ತು ತಿರುಮಲಸಾಗರ ಸೇರಿದಂತೆ ಹಲವು ಹಳ್ಳಿಗಳ ರೈತರಿಗೆ ಅನುಕೂಲವಾಗಲಿದೆ ಎಂದರು.
ಚಿನಕುರಳಿ ಬಳಿಯ ಕನಗನಹಳ್ಳಿ ಗ್ರಾಮದಲ್ಲಿ ಕುಸುಮ್ ಯೋಜನೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ. ಎಂ.ಶೆಟ್ಟಹಳ್ಳಿ ಗ್ರಾಮದ ಬಳಿ ಇಷ್ಟರಲ್ಲಿಯೇ ಕುಸುಮ್ ಯೋಜನೆಯಡಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದ ಕಾಮಗಾರಿ ಪ್ರಾರಂಭಿಸಲಾಗುವುದು. ಸೋಲಾರ್ ವಿದ್ಯುತ್ ಉತ್ಪಾದನೆಯಿಂದ ಮತ್ತಷ್ಟು ವಿದ್ಯುತ್ ಉತ್ಪಾದನೆ ಆಗುವುದರಿಂದ ವಿದ್ಯುತ್ ಸಮಸ್ಯೆ ಬಗೆಹರಿಯುತ್ತದೆ.
ಆನುವಾಳು ಗ್ರಾಮದ ಬಳಿ 10 ಎಕರೆ ಪ್ರದೇಶದಲ್ಲಿ 2.5 ಕೆ.ವಿ.ಉತ್ಪಾದನಾ ವಿತರಣಾ ಕೇಂದ್ರದ ಶಂಕುಸ್ಥಾಪನೆಗೆ ಇಷ್ಟರಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಸೆಸ್ಕ್ ಎಇಇ ಕೆ.ರವಿಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಟಿಎಪಿಸಿಎಂಸ್ ನಿರ್ದೇಶಕ ಟಿ.ಎಸ್.ಹಾಳಯ್ಯ, ಹೌಸಿಂಗ್ ಬೋರ್ಡ್ ನಿರ್ದೇಶಕರಾದ ವೆಂಕಟೇಶ್ ಮೊದಲಿಯಾರ್, ಶಿವಕುಮಾರ್, ಮುಖಂಡರಾದ ಕೆ.ಹೊಸೂರು ರಮೇಶ್, ಜಯರಾಮೇಗೌಡ, ಟಿ.ಎಸ್.ಛತ್ರ ಬೋಳಾರೇಗೌಡ, ಶಿವಕುಮಾರ್, ರೈತ ಸಂಘದ ಮುಖಂಡರಾದ ಪಾಪಯ್ಯ, ಜವರಪ್ಪ, ಅತ್ತಿಗಾನಹಳ್ಳಿ ಸಿದ್ದೇಗೌಡ, ನಿವೃತ್ತ ಶಿಕ್ಷಕ ಬೆಟ್ಟಯ್ಯ, ಪಿಡಿಒ ಕುಮಾರ್, ಗುತ್ತಿಗೆದಾರ ಪುರುಷೋತ್ತಮ, ಸಮಾಜ ಸೇವಕ ದತ್ತ ಇತರರು ಇದ್ದರು.