ಪಾಂಡವಪುರ ಪಟ್ಟಣದಲ್ಲಿ ಚಂಪಾಷಷ್ಠಿ ಪ್ರಯುಕ್ತ ಭಕ್ತರು ತನಿ ಎರೆದು ಭಕ್ತಿ ಸಮರ್ಪಿಸಿದರು.
ಪಾಂಡವಪುರ: ಪಟ್ಟಣದ ಶ್ರೀಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ 68ನೇ ವರ್ಷದ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.
ಬೆಳಗಿನ ಜಾವದಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಭಕ್ತಿ ಸಮರ್ಪಿಸಿದರು. ಈ ವೇಳೆ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಿತು. ಹರಕೆ ಹೊತ್ತ ಭಕ್ತರು ದೇವರಿಗೆ ಹಾಲು, ಬೆಣ್ಣೆ, ಹಣ್ಣು, ನಾಗರ ಸಮರ್ಪಿಸಿ, ವಿವಾಹ, ಸಂತಾನ ಪ್ರಾಪ್ತಿ, ವ್ಯಾಪಾರ ವೃದ್ಧಿಯಾಗಲಿ ಎಂದು ಬಾಯಿಬೀಗ ಹಾಕಿಕೊಂಡು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
ಇದೇ ವೇಳೆ ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿ ರಥೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಷಷ್ಠಿ ಮಹೋತ್ಸವದಲ್ಲಿ ವಿಶ್ವೇಶ್ವರಯ್ಯ ನಾಲೆಯಲ್ಲಿ ಸ್ನಾನ ಮಡಿ ಮಾಡಿ ದೇವಸ್ಥಾನಕ್ಕೆ ತೆರಳಿದರು.
ಈ ವೇಳೆ ಪಟ್ಟಣ ಸೇರಿದಂತೆ ತಾಲೂಕಿನ ಶಂಭೂನಹಳ್ಳಿ, ಕೆ.ಬೆಟ್ಟಹಳ್ಳಿ, ಹುಲ್ಕೆರೆ, ಹುಲ್ಕೆರೆಕೊಪ್ಪಲು, ವಡ್ಡರಹಳ್ಳಿ, ಕೆಂಚನಹಳ್ಳಿ, ಚಂದ್ರೆ, ಕೆರೆತೊಣ್ಣೂರು, ಕೆ.ಹೊಸೂರು, ಟಿ.ಎಸ್.ಛತ್ರ, ಹಿರೇಮರಳಿ, ಹಾರೋಹಳ್ಳಿ, ಡಾಮಡಹಳ್ಳಿ, ಎಲೆಕೆರೆ, ಪಟ್ಟಸೋಮನಹಳ್ಳಿ, ಚಿಕ್ಕಾಡೆ, ದೇವೇಗೌಡನಕೊಪ್ಪಲು, ಬೇವಿನಕುಪ್ಪೆ ಇತರೆ ಗ್ರಾಮಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಸ್ಥಾನದ ಹಿಂಭಾಗದಲ್ಲಿರುವ ಹುತಕ್ಕೆ ತನಿ ಎರೆದು ಪೂಜೆ ಸಲ್ಲಿಸಿದರು.
ಭಕ್ತರಿಗೆ ಪ್ರಸಾದ ವಿನಿಯೋಗ: ಷಷ್ಠಿ ಪ್ರಯುಕ್ತ ನಡೆದ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ಇದೇ ವೇಳೆ ಲಾಡು ಮಾರಾಟ ಮಾಡಲಾಯಿತು. ತಾಲೂಕಿನ ಚಿನಕುರಳಿ, ಕೆನ್ನಾಳು, ಡಿಂಕಾ ಸೇರಿದಂತೆ ವಿವಿಧೆಡೆಗಳಲ್ಲಿಯೂ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು.