ಮದ್ದೂರಿನ ಶಿವಪುರದ ಪೂರ್ಣಪ್ರಜ್ಞಾ ಕಾನ್ವೆಂಟ್‌ನಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಶ್ರೀ ಡಾ.ನಿಶ್ಚಲಾನಂದನಾಥಸ್ವಾಮಿ, ಡಾ.ಎಸ್.ವೆಂಕಟೇಶ್ವರ ಶರ್ಮ, ಪಿ.ಕಸ್ತೂರಿ ಅನಂತೇಗೌಡ, ಎಚ್.ಆರ್.ಅನಂತೇಗೌಡ, ಧನಂಜಯ, ಡಾ.ಕೃಷ್ಣ, ಮರಿಗೌಡ, ರಾಜೇಂದ್ರ ಇದ್ದರು.
- ಶ್ರೀ ಡಾ.ನಿಶ್ಚಲಾನಂದನಾಥಸ್ವಾಮಿ ಹೇಳಿಕೆ
- ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ
ಮದ್ದೂರು: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ವಿಶ್ವದ ಗಮನ ಸೆಳೆದಿರುವುದು ಪ್ರಶಂಸನೀಯ ಸಂಗತಿ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿಶ್ಚಲಾನಂದನಾಥಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಶಿವಪುರದ ಪೂರ್ಣಪ್ರಜ್ಞಾ ಕಾನ್ವೆಂಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ, 2024-25 ನೇ ಸಾಲಿನ ಸಂಸ್ಥೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಹಿಂದೆ ಉಳಿದಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇಂದು ಬಹುತೇಕ ದೇಶಗಳಲ್ಲಿ ನಮ್ಮ ದೇಶದ ವಿಜ್ಞಾನಿಗಳೇ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಅಮೆರಿಕದಲ್ಲಿ ಶೇ.50 ರಷ್ಟು ವಿಜ್ಞಾನಿಗಳು ನಮ್ಮ ದೇಶದವರು. ಅಮೆರಿಕದ ಅಧ್ಯಕ್ಷರಿಗೆ ವಿಶೇಷ ವೈದ್ಯಕೀಯ ಸಲಹೆಗಾರರಾಗಿರುವುದು ಮಂಡ್ಯದ ಜಿಲ್ಲೆಯ ಹಲ್ಲೆಗೆರೆ ಗ್ರಾಮದ ಡಾ.ವಿವೇಕ್ ಎಂಬುವುದು ಹೆಮ್ಮೆಯ ಸಂಗತಿ ಎಂದರು.
ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ ಅವರ ನಿರಂತರ ಶ್ರಮದಿಂದ ಸಂಸ್ಥೆಯು ಅತ್ಯುತ್ತಮವಾಗಿ ನಡೆಯುತ್ತಿದ್ದು, ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಳ್ಳುತ್ತಿದ್ದಾರೆ ಎಂದರು.
ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದ ಬೆಂಗಳೂರು ಇಸ್ರೋ ಡೆಪ್ಯೂಟಿ ಡೆರಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶದ ಋಷಿಮುನಿಗಳೇ ಭಾರತದ ವಿಜ್ಞಾನಿಗಳಾಗಿದ್ದರು. ಮಹಾಭಾರತದ ಕಾಲದಲ್ಲಿಯೇ ಗ್ರಹಗತಿಗಳು ಹೇಗೆ ಸಂಭವಿಸುತ್ತವೆ. ಪಂಚಾಂಗದಿಂದ ಯಾವಾಗ ಒಳ್ಳೆಯ ದಿನಗಳು ಬರುತ್ತವೆ ಎಂಬುದನ್ನು ತಪಸ್ಸು, ಜ್ಞಾನವೇ ಇಂದು ವಿಜ್ಞಾನ ಮತ್ತು ತಂತ್ರಜ್ಞಾನವಾಗಿದೆ ಎಂದರು.
30 ವರ್ಷಗಳ ಹಿಂದೆಯೇ ಅಮೆರಿಕ ಚಂದ್ರಯಾನ ಮಾಡಿತ್ತು. ಆದರೆ, ಚಂದ್ರಯಾನದಲ್ಲಿ ನೀರಿದೆ ಅಂತ ಪತ್ತೆ ಹಚ್ಚಿದ್ದು ಭಾರತ. ಮಂಗಳಯಾನಕ್ಕೆ ಹೋಗಲು ಅಮೆರಿಕ 4 ಬಾರಿ ಪ್ರಯತ್ನ ಮಾಡಿ 5ನೇ ಬಾರಿಗೆ ಯಶಸ್ವಿಯಾಗಿದೆ. ರಷ್ಯಾ 3 ಬಾರಿ ಪ್ರಯತ್ನ ಮಾಡಿ 4 ನೇ ಬಾರಿಗೆ ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ದೇಶ ಪ್ರಪಥಮ ಬಾರಿಗೇ ಯಶಸ್ವಿಯಾಗಿದ್ದು, ಚಂದ್ರಯಾನ - 3 ರಲ್ಲೂ ಸಹ ಯಶಸ್ವಿಯಾಗಿದೆ ಎಂದರು.
ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ - ವಿಚಾರಗಳನ್ನು ಶ್ರದ್ಧೆಯಿಂದ ಕಲಿಸಬೇಕು. ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಆಹಾರ ಪದ್ಧತಿ, ಮನುಷ್ಯರ ಜೀವನ ಶೈಲಿಯನ್ನು ಶಿಕ್ಷಣದ ಜತೆಗೆ ಕಲಿಸಬೇಕು ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಕ ಕೊಡುವ ಜತೆಗೆ ಶಿಸ್ತು, ಸಂಸ್ಕಾರ, ಗುರು, ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಕಲಿಸುತ್ತಿರುವುದು ಮೆಚ್ಚುಗೆಯ ವಿಷಯ ಎಂದರು.
ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳ ಜ್ಞ್ಞಾನಾರ್ಜನೆ, ಸೃಜನಶೀಲ ಮತ್ತು ವಾಣಿಜ್ಯ ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿದೆ. ಸಂಸ್ಕೃತಿ, ಕಲೆ, ವಿಜ್ಞಾನ ಹಾಗೂ ಇತಿಹಾಸವನ್ನು ಪರಿಣಾಮಕಾರಿ ತಿಳಿಸುತ್ತದೆ. ಆದ್ದರಿಂದ ವಿಜ್ಞಾನ ವಸ್ತು ಪ್ರದರ್ಶನಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎಂದು ತಿಳಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ 750 ಕ್ಕೂ ಹೆಚ್ಚು ವಿವಿಧ ಮಾದರಿ ತಯಾರಿಸಿ ಅದರ ಸಂಪೂರ್ಣವಾಗಿ ವಿವರ ನೀಡಿದ್ದು, ಗಣ್ಯರ ಹಾಗೂ ಪಾಲಕರ ಗಮನ ಸೆಳೆಯಿತು.
ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ, ಬಿಇಒ ಎಸ್.ಬಿ.ಧನಂಜಯ, ನಿವೃತ್ತ ಬಿಇಒ ಮರಿಗೌಡ, ನಿವೃತ್ತ ಮುಖ್ಯ ಅಭಿಯಂತರ ಎಸ್.ವಿ.ರಮೇಶ್, ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಪಿ.ನಾಗೇಶ್, ಉಪನ್ಯಾಸಕರಾದ ಎಂ.ರಾಜೇಂದ್ರ, ಜಿ.ಎನ್.ಪುಟ್ಟರಾಜು ಇತರರಿದ್ದರು.