ಮದ್ದೂರು: ನಿಸರ್ಗನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹುಲಿಗೆರೆಪುರ ಸಂಸ್ಥೆ ವತಿಯಿಂದ ಸೆ.30ರಂದು ನಿರಾಶ್ರಿತರ ನಡೆ-ವಸತಿ ಕಡೆ ನಿರಾಶ್ರಿತರಿಗೆ ನೆರಳು ಕಾರ್ಯಕ್ರಮ ಮತ್ತು ಗೃಹಪ್ರವೇಶ ಆಯೋಜಿಸಿರುವುದಾಗಿ ಸಂಸ್ಥಾಪಕ ಅಧ್ಯಕ್ಷ ಹುಲಿಗೆರೆಪುರ ಮಹದೇವು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳ ಸಭೆ ವೇಳೆ ಮಾತನಾಡಿದ ಅವರು, ತಾಲೂಕಿನಾದ್ಯಂತ ಆರ್ಥಿಕವಾಗಿ ಹಿಂದುಳಿದಿರುವವರನ್ನು ಗುರುತಿಸಿ ಸೂರು ಇಲ್ಲದವರಿಗೆ ಸೂರು ಹಾಗೂ ನಿವೇಶನ ಒದಗಿಸಲು ಮುಂದಾಗಿರುವುದಾಗಿ ತಿಳಿಸಿದರು.
ನಗರಕೆರೆ ಗ್ರಾಪಂ ವ್ಯಾಪ್ತಿಯ ವೈದ್ಯನಾಥಪುರದ ನಿರಾಶ್ರಿತ ಮಹಿಳೆ ಈರಮ್ಮ ಅವರಿಗೆ ನಿವೇಶನ ಖರೀದಿಸುವ ಜತೆಗೆ ಸೂರು ಸೌಲಭ್ಯವನ್ನು ಒದಗಿಸಿ ಸುಮಾರು 14 ಲಕ್ಷದ ಮನೆ ಮತ್ತು ವೈದ್ಯನಾಥಪುರ ಗ್ರಾಮದ ಲಕ್ಷ್ಮಮ್ಮ ಎಂಬುವರು ಸುಮಾರು ವರ್ಷಗಳಿಂದಲೂ ರಸ್ತೆ ಬದಿಯಲ್ಲಿ ವಾಸಿಸುತ್ತಿರುವುದನ್ನು ಮನಗೊಂಡು ಸುಮಾರು 8 ಲಕ್ಷ ರೂ. ವೆಚ್ಚದ ನಿವೇಶನವನ್ನು ಖರೀದಿ ಮಾಡಿರುವುದಾಗಿ ಹೇಳಿದರು.
ನಿರಾಶ್ರಿತ ವಾಸಿಗಳಿಗೆ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಸಂಸ್ಥೆಯು ಉಚಿತವಾಗಿ ಮನೆ ನಿರ್ಮಿಸಿ ಅಗತ್ಯ ದಾಖಲೆವುಳ್ಳ ಪತ್ರ ಮನೆ ಬೀಗದ ಕೀಯನ್ನು ಹಸ್ತಾಂತರ ಮಾಡುತ್ತಿರುವುದಾಗಿ ಮುಂದಿನ ದಿನಗಳಲ್ಲಿ ತಾಲೂಕಿನ ಬ್ಯಾಲದಕೆರೆ, ಹುಲಿಗೆರೆಪುರ ಹಾಗೂ ಸೋಂಪುರ ಗ್ರಾಮದ ನಿರಾಶ್ರಿತ ನಿವಾಸಿಗಳಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡುವ ಜತೆಗೆ ಮಹಾಮಾತೆ ರಮಾಬಾಯಿ ಅಂಬೇಡ್ಕರ್ ನಿವಾಸ ಎಂಬ ಹೆಸರಿನಲ್ಲಿ ಗೃಹಪ್ರವೇಶಕ್ಕೂ ಯೋಜನೆ ರೂಪಿಸಲಾಗಿದೆ ಎಂದರು.
ಸಂಸ್ಥೆಯ ಪದಾಧಿಕಾರಿಗಳಾದ ಮಹೇಶ್, ರಾಜೇಶ್, ಎ.ಕೃಷ್ಣಪ್ಪ, ಎಚ್.ಪಿ.ಶ್ರೀಧರ್ ಹಾಜರಿದ್ದರು.