ನಾಗಮಂಗಲ: ಕಾಳಸಂತೆಕೋರರ ಜತೆಗೂಡಿ ಖರೀದಿಸಿ ಅಕ್ರಮವಾಗಿ ಸಾಗಿಸುತ್ತಿದ್ದ 96, 900 ರೂ. ಮೌಲ್ಯದ ಅನ್ನಭಾಗ್ಯ ಯೋಜನೆಯ 28.5 ಕ್ವಿಂಟಾಲ್ ಅಕ್ಕಿ ಮತ್ತು ಗೂಡ್ಸ್ ವಾಹನವನ್ನು ಆಹಾರ ಇಲಾಖೆಯ ಅಧಿಕಾರಿಗಳು ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ಬುಧವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಗ್ರಾಮದ ಎಸ್.ಸುದೀಪ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಸಾಗಿಸುತ್ತಿದ್ದ ವೇಳೆ ಮಾಲು ಸಮೇತ ಸಿಕ್ಕಿಬಿದ್ದಿರುವ ಆರೋಪಿ.
ಸರ್ಕಾರದ ಪರವಾನಗಿ ಇಲ್ಲದೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಗೂಡ್ಸ್ ವಾಹನದಲ್ಲಿ ತಾಲೂಕಿನ ಬೆಳ್ಳೂರು ಕ್ರಾಸ್ ಮಾರ್ಗವಾಗಿ ನಾಗಮಂಗಲ ಪಟ್ಟಣದ ಕಡೆಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಆಹಾರ ಇಲಾಖೆ ನಿರೀಕ್ಷಕರಾದ ಅನಿಲ್ಕುಮಾರ್ ಮತ್ತು ಶ್ರೀನಿವಾಸ್ ಬೆಳ್ಳೂರು ಠಾಣೆಯ ಪೊಲೀಸರ ನೆರವು ಪಡೆದು ಬುಧವಾರ ರಾತ್ರಿ 7.30ರ ಸಮಯದಲ್ಲಿ ಕಾರ್ಯಾಚರಣೆಗಿಳಿದರು.
ಬೆಳ್ಳೂರು ಕ್ರಾಸ್ನ ಹಳ್ಳದ ಸೇತುವೆ ಬಳಿ ಅಕ್ಕಿ ತುಂಬಿದ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಲಾಗಿ ವಿವಿಧ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ತುಂಬಿರುವುದು ಕಂಡುಬಂದಿದೆ. ಅಕ್ಕಿ ಸಾಗಿಸುವ ಕುರಿತು ರಸೀದಿ ಮತ್ತು ರಹದಾರಿ ಪತ್ರವನ್ನು ಹಾಜರುಪಡಿಸುವಂತೆ ಅಧಿಕಾರಿಗಳು ಚಾಲಕನನ್ನು ವಿಚಾರಿಸಿದ ವೇಳೆ ತನ್ನ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿದ್ದಾನೆ.
ನಂತರ 80 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಅಕ್ಕಿ ಮತ್ತು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದ ಅಧಿಕಾರಿಗಳು ಬೆಳ್ಳೂರು ಪೊಲೀಸ್ ಠಾಣೆಗೆ ತರಿಸಿ ಎಲೆಕ್ಟ್ರಾನಿಕ್ ಯಂತ್ರದ ಮೂಲಕ ತೂಕ ಹಾಕಿದ ವೇಳೆ 2,850 ಕೆ.ಜಿ. ಅಕ್ಕಿ ಇದ್ದು, ಇದರ ಮೌಲ್ಯ 96,900 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ತಡರಾತ್ರಿಯೇ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವಹಿಸಿದ್ದಾರೆ.