ಮದ್ದೂರು ತಾಲೂಕಿನ ಆಲೂರು ಗ್ರಾಮದಲ್ಲಿರುವ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಕರಪತ್ರಗಳನ್ನು ದೇಗುಲದ ವ್ಯವಸ್ಥಾಪಕ ಪೂಜಾರಿ ನಿಜಬೀರಪ್ಪ ಹೆಗಡೆ ಬಿಡುಗಡೆಗೊಳಿಸಿದರು. ಪೂಜಾರಿ ಶಿವಬೀರಯ್ಯ, ಪೂಜಾರಿ ಬೀರೇಶ್ ಕಬ್ಬಾರೆ, ಪೂಜಾರಿ ಬೀರೇಶ್, ಮಹದೇವು, ರಾಮಣ್ಣ, ಭರತ್, ಕಾರ್ತಿಕ್‌ಹೆಗಡೆ ಸೇರಿದಂತೆ ಇತರರಿದ್ದರು. 
ಮಂಡ್ಯ

24ರಿಂದ ವಿವಿಧ ಧಾರ್ಮಿಕ ಕೈಂಕರ್ಯ

ರವಿಕುಮಾರ್ ಪಿ. ಕೆ
ಮದ್ದೂರು: ತಾಲೂಕಿನ ಆಲೂರು ಗ್ರಾಮದಲ್ಲಿರುವ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಫೆ. 24ರಿಂದ 26ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇಗುಲದ ವ್ಯವಸ್ಥಾಪಕ ಪೂಜಾರಿ ನಿಜಬೀರಪ್ಪ ಹೆಗ್ಗಡೆ ತಿಳಿಸಿದರು.
ದೇಗುಲದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯಕ್ರಮದ ಅಂತಿಮ ಸಿದ್ಧತೆ ಪರಿಶೀಲಿಸಿ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಿ ಶನಿವಾರ ಮಾತನಾಡಿದರು. ಫೆ.24ರಂದು ಸಂಜೆ ಮೂಲ ದೇವತಾ ಪ್ರಾರ್ಥನೆ, ಶ್ರೀ ಮಹಾಗಣಪತಿ ಪೂಜೆ ಸ್ವಸ್ತ ಶೈವಪುಣ್ಯಾಹ ವಾಚನೆ, ಪಂಚಗವ್ಯಸಾಧನ, ಅಚಾರ್ಯ ಋತ್ವಿಗ್ವರುಣ, ರಾಕ್ಷೋಜ ಹೋಮ ವಾಸ್ತುಪೂಜೆ, ವಾಸ್ತುಹೋಮ, ಬಲಿ ಪ್ರಧಾನ ಪರ್ಯಗ್ನಿಕರಣ, ಅಂಕುರಾರ್ಪಣ, ಸಂಜೆ ಗಂಟೆಗೆ ಆಲೂರು ಮತ್ತು ಆಲೂರು ದೊಡ್ಡಿ ಗ್ರಾಮಸ್ಥರಿಂದ ಮೀಸಲು ನೀರು ತರುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.25ರಂದು ಬೆಳಗ್ಗೆ ವೇದಪಾರಾಯಣ, ಪುಣ್ಯಾಹಃವಾಚನ, ಯಾಗಶಾಲಾ ಪ್ರವೇಶ, ಬಿಂಬಶುದ್ಧಿ, ನೋತ್ರೋನ್ಮಿಲನ, ಜಲಾಧಿವಾಸ, ಕ್ಷೀರಾಧಿವಾಸ, ಮಂಟಪ ಸಂಸ್ಕಾರ, ಪ್ರಧಾನಕಲಶಾದಿಗಳ ಸ್ಥಾಪನೆ, ಅಗ್ನಿ ಪ್ರತಿಷ್ಠೆ, ಮೂಲಮಂತ್ರ ಹೋಮ, ಮಂಗಳಾರತಿ, ಸಂಜೆ ದಾನ್ಯಾಧಿವಾಸ, ಪುಷ್ಪಾಧಿವಾಸ, ಫಲಾಧಿವಾಸ, ಶಯ್ಯಧಿವಾಸ, ಪ್ರಧಾನ ಕಲಶಾರಾಧನೆ, ಅಧಿವಾಸ ಹೋಮಗಳು, ಅಷ್ಟಾವಧಾನ ಸೇವೆ, ರತ್ನನ್ಯಾಸ, ಯಂತ್ರನ್ಯಾಸ, ಪಿಂಡಿಕಾ ಸ್ಥಾಪನೆ, ವಿಗ್ರಹ ಪ್ರತಿಷ್ಠೆ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ.26ರಂದು ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಫೆ.27 ರಂದು ಬೆಳಗ್ಗೆ ಹುಲಿಪ್ರದರ್ಶನ, ಕತ್ತಿಪವಾಡ, ಮೈಲಾರ ಲಿಂಗಧಾರಿಗಳಾದ ಗೊರವಯ್ಯ ಹಾಗೂ ಗಣಾಚಾರಿಗಳಿಂದ ಮಣೇವು ಪೂಜೆ ಹಾಗೂ ಶ್ರೀ ಬೀರೇಶ್ವರಸ್ವಾಮಿ ಗಡಿ ಕೂಟದ ದೇವರುಗಳ ಮೆರವಣಿಗೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ನಂಜನಗೂಡಿನ ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ವಹಿಸಲಿದ್ದಾರೆ. ಶಾಸಕ ಕೆ.ಎಂ.ಉದಯ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಜತೆಗೆ ರಾಜ್ಯ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಯಜಮಾನರಾದ ಚೇತನ್, ನಾಗೇಂದ್ರ, ಶ್ರೀಧರ್, ಮಧು ಹೆಗಡೆ, ಸೋಮಶೇಖರ್, ಬೀರಯ್ಯ, ರಾಮಣ್ಣ, ಭರತ್, ಕಾರ್ತಿಕ್, ಮಹದೇವು, ಪೂಜಾರಿಗಳಾದ ಶಿವಬೀರಯ್ಯ, ಬೀರೇಶ್ ಕಬ್ಬಾರೆ, ಬೀರೇಶ್ ಆಲೂರು, ಬೀರೇಶ್ ಎಲೆಕೆರೆ, ಮುಖಂಡರಾದ ದಿನೇಶ್, ಸುಪ್ರೀತ್ ಸೇರಿದಂತೆ ಇತರರು ಇದ್ದರು.