ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯ ಆರ್.ಕೆ.ವಿದ್ಯಾಸಂಸ್ಥೆಯ ಬಳಿ ಗಾಂಧಿ ಸ್ಮಾರಕ ಭವನ ನಿರ್ಮಿಸಿಕೊಡುವಂತೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ ಅವರಿಗೆ ಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರು.ವಿನಯ್‌ರಾಮಕೃಷ್ಣ, ಮರಿತಿಬ್ಬೇಗೌಡ, ಸತೀಶ್‌ಬಾಬು, ತುಕಾರಾಮ್, ಶಿವಣ್ಣಗೌಡ ಇದ್ದರು.
- ಆರ್.ಕೆ. ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ ಘೋಷಣೆ
ಮದ್ದೂರು : ಕೆ.ಹೊನ್ನಲಗೆರೆಯ ಆರ್.ಕೆ. ವಿದ್ಯಾಸಂಸ್ಥೆಯ ಬಳಿ ಸಂಸ್ಥೆ ವತಿಯಿಂದ ಗಾಂಧಿ ಮಾನವ ಸಂಪನ್ಮೂಲ ಕೇಂದ್ರಕ್ಕೆ (ಗಾಂಧಿ ಸ್ಮಾರಕ ಭವನಕ್ಕೆ) 2 ಎಕರೆ ಜಾಗವನ್ನು ನೀಡಲು ಬದ್ಧರಾಗಿರುವುದಾಗಿ ಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ ಹೇಳಿದರು.
ತಾಲೂಕಿನ ಕೆ.ಹೊನ್ನಲಗೆರೆಯ ಆರ್.ಕೆ.ವಿದ್ಯಾಸಂಸ್ಥೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ, ಗಾಂಧೀಜಿ ಅವರ ಬಹುಮುಖಿ ವ್ಯಕ್ತಿತ್ವ ಮತ್ತು ಚಿಂತನೆಗಳ ಪ್ರಸ್ತುತತೆ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಅರ್ಪಿಸಿದ ಗಾಂಧೀಜಿ ಅವರ ಸ್ಮಾರಕವು ನಮ್ಮ ತಾಲೂಕಿನಲ್ಲಿ ಅದರಲ್ಲೂ ನಮ್ಮ ಸಂಸ್ಥೆಯ ಬಳಿ ಆಗುವುದೂ ಸಂತಸವೆಂದ ಅವರು, ಈ ಬಗ್ಗೆ ಅಗತ್ಯ ಕ್ರಮವಹಿಸಿ ಸಹಕರಿಸಬೇಕು ಎಂದು ಮನವಿ ಪತ್ರವನ್ನು ವೇದಿಕೆಯಲ್ಲಿದ್ದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ವೂಡೇ ಪಿ ಕೃಷ್ಣ ಅವರಿಗೆ ಹಸ್ತಾಂತರಿಸಿದರು.
ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಅವರ ತತ್ವ, ಆದರ್ಶಗಳನ್ನು ಅನುಸರಿಸಬೇಕು, ಅವರ ಬಗೆಗಿನ ಜೀವನ ಚರಿತ್ರೆಗಳು ಸೇರಿದಂತೆ ಪುಸ್ತಕಗಳನ್ನು ಓದಬೇಕು. ಆ ಮೂಲಕ ಕನಿಷ್ಠ ಶೇ.1ರಷ್ಟಾದರೂ ಅವರ ಆದರ್ಶಗಳನ್ನು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. ಬೆಂಗಳೂರಿನಲ್ಲಿರುವ ಎಷ್ಟೋ ದೊಡ್ಡ ದೊಡ್ಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ಯಾರೆಂದೇ ಗೊತ್ತಿಲ್ಲ, ಇದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ ದೇಶ ಹಾಗೂ ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ ಹಾಗೂ ಶಕ್ತಿ. ಅವರ ತ್ಯಾಗ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪರಿಯನ್ನು ಜನತೆ ಎಂದಿಗೂ ಮರೆಯುವುದಿಲ್ಲ. ಮಹಾತ್ಮರ ಸ್ಮಾರಕ ನಿರ್ಮಾಣಕ್ಕೆ ತಾಲೂನಿಂದ ಆರ್.ಕೆ.ವಿದ್ಯಾ ಸಂಸ್ಥೆಯವರು ಭೂಮಿ ನೀಡಲು ಮುಂದೆ ಬಂದಿರುವುದು ಸಂತಸ ತಂದಿದೆ. ಈ ಬಗ್ಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಧ್ಯಾಹ್ನ ಸತ್ಯ ಮತ್ತು ಅಹಿಂಸೆ ಜತೆಗಿನ ಪ್ರಯೋಗಗಳು ಗಾಂಧೀಜಿ ಕುರಿತು ಹಾಸನ ಜಿಲ್ಲೆಯ ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ರೋಹಿತ್ ಹಾಗೂ ವಿಶ್ರಾಂತ ಪ್ರಾಂಶುಪಾಲೆ ಡಾ.ಲೀಲಾ ಅಪ್ಪಾಜಿ ಯಶೋಧರಮ್ಮ ದಾಸಪ್ಪ ಒಂದು ಸಂಸ್ಮರಣೆ ವಿಷಯದ ಬಗ್ಗೆ ಗೋಷ್ಠಿ ನಡೆಸಿಕೊಟ್ಟರು. ಶಂಕರೇಗೌಡ ಶಿಕ್ಷಣ ಮಹಾವಿದ್ಯಾನಿಲಯದ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಜಿ..ವಿ ಶಿವರಾಜು ಗಾಂಧೀ ತತ್ವಗಳ ಬಗ್ಗೆ ಉಪನ್ಯಾಸ ನೀಡಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಮರೀತಿಬ್ಬೆಗೌಡ, ಪ್ರಾಂಶುಪಾಲರಾದ ಸತೀಶ್ ಬಾಬು, ಆಡಳಿತಾಧಿಕಾರಿ ಮರಿಸ್ವಾಮಿಗೌಡ ಇದ್ದರು.