ಪಾಂಡವಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸಂತೆ ಮೈದಾನ, ದಿನವಹಿ ವ್ಯಾಪಾರದ ನೆಲ ಬಾಡಿಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು. ಮುಖ್ಯಾಧಿಕಾರಿ ಸತೀಶ್ ಕುಮಾರ್, ವ್ಯವಸ್ಥಾಪಕಿ ಮಂಜುಳಾ ಇತರರು ಇದ್ದರು.
ಪಾಂಡವಪುರ : ಪಟ್ಟಣದಲ್ಲಿ ಪ್ರತಿ ವಾರ ನಡೆಯುವ ಒಂದು ದಿನದ ಸಂತೆಯ ನೆಲ ಸುಂಕ ವಸೂಲಿ, ಪುರಸಭೆ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ವ್ಯಾಪಾರಸ್ಥರಿಂದ ದಿನವಹಿ ನೆಲ ಸುಂಕ ಹಾಗೂ ಪುರಸಭೆಗೆ ಸೇರಿದ ತೆಂಗಿನಮರದ ಫಸಲು ಕೊಯ್ದುಕೊಳ್ಳುವ ಹಕ್ಕನ್ನು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ಬಹಿರಂಗ ಹರಾಜು ಮಾಡಲಾಯಿತು.
ಹರಾಜು ಪ್ರಕ್ರಿಯೆಯಲ್ಲಿ ಮೊದಲಿಗೆ ಗುರುವಾರ ಸಂತೆಯ ನೆಲ ಸುಂಕ ವಸೂಲಿಗೆ ಹರಾಜು ನಡೆಯಿತು. ಸರ್ಕಾರಿ ಬಿಡ್ಡು 6.75ಲಕ್ಷ ರೂ.ಗಳಿಂದ ಹರಾಜಿನ ಬಿಡ್ಡು ಕೂಗಲಾಯಿತು. 7.10ಲಕ್ಷ ರೂ.ಗೆ ಶಶಿಕುಮಾರ್ ಬಿನ್ ಲಕ್ಷ್ಮೇಗೌಡ ಹಾರೋಹಳ್ಳಿ ಅವರು ಬಿಡ್ಡು ಕೂಗಿದರು. 13 ಜನ ಹರಾಜಿನಲ್ಲಿ ಭಾಗಿಯಾಗಿದ್ದರು. 15, 20, 25, 30 ರೂ.ಗಳವರೆಗೆ ಸುಂಕ ವಸೂಲಿ ಮಾಡಬೇಕು. ಕಡ್ಡಾಯ ರಸೀದಿ ನೀಡಬೇಕು. ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡಬಾರದು. ಜತೆಗೆ ರೈತರಿಂದ ಯಾವುದೇ ಸುಂಕ ವಸೂಲಿ ಮಾಡಬಾರದು ಎಂದು ನಿರ್ಣಯಿಸಲಾಯಿತು.
ಬಳಿಕ ಪುರಸಭೆ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ವ್ಯಾಪಾರಸ್ಥರಿಂದ ದಿನವಹಿ ನೆಲ ಸುಂಕ (ಗುರುವಾರ ಹೊರತುಪಡಿಸಿ) ವಸೂಲಿಗೆ ಹರಾಜು ನಡೆಯಿತು. ಸರ್ಕಾರಿ ಬಿಡ್ಡು 7.15ಲಕ್ಷ ರೂ.ಗಳಿಂದ ಬಿಡ್ಡು ಕೂಗಲಾಯಿತು. 12.40 ಲಕ್ಷ ರೂ.ಗೆ ಚಂದ್ರಶೇಖರ್ ಬಿನ್ ಸಿ.ಕೆ.ದೇವೇಗೌಡ ಪಾಂಡವಪುರ ಅವರು ಬಿಡ್ಡು ಕೂಗಿದರು. ಹರಾಜಿನಲ್ಲಿ 16 ಜನ ಭಾಗಿಯಾಗಿದ್ದರು.
ನಂತರ ಪುರಸಭೆಗೆ ಸೇರಿದ ಕೃಷ್ಣನಗರ ಪಂಪ್‌ಹೌಸ್ ನಲ್ಲಿರುವ 9, ದರಸಗುಪ್ಪೆ ನೀರು ಶುದ್ಧೀಕರಣ ಘಟಕದ 2 ಹಾಗೂ ಪುರಸಭೆ ಕಚೇರಿ ಆವರಣದಲ್ಲಿರುವ 3 ತೆಂಗಿನಮರ ಸೇರಿದಂತೆ ಒಟ್ಟು 14 ತೆಂಗಿನ ಮರದ ಫಸಲು ಕೊಯ್ದುಕೊಳ್ಳುವ ಹರಾಜು ನಡೆಯಿತು. 18.5 ಸಾವಿರ ರೂ.ಗೆ ಕಿಡ್ಸ್ ಕಾರ್ಟ್ಸ್ ನ ಲಲಿತಾ ಅವರಿಗೆ ಬಿಡ್ಡು ದೊರಕಿತು. ಹರಾಜಿನಲ್ಲಿ ಇಬ್ಬರು ಭಾಗಿಯಾಗಿದ್ದರು. ಉಳಿದಂತೆ ಹಳೇ ಬಸ್ ನಿಲ್ದಾಣದ ಖಾಸಗಿ ವಾಹನ ಸುಂಕ ವಸೂಲಿ ಹರಾಜನ್ನು ನವೀಕರಣದ ಹಿನ್ನೆಲೆ ಮುಂದೂಡಲಾಯಿತು. ಇನ್ನೂ ಸಂತೆ ಮೈದಾನದ ಮಾಂಸ ಮಾರುಕಟ್ಟೆಯಲ್ಲಿ ಮಾಂಸ ಕಟಾಯಿಸಿ ಮಾರುವ ಹರಾಜಿಗೆ ಯಾರು ಕೂಡ ಡಿಡಿ ಹಣ ಕಟ್ಟದ ಕಾರಣ ಬಹಿರಂಗ ಹರಾಜು ರದ್ದಾಯಿತು.
ಹರಾಜು ಪ್ರಕ್ರಿಯೆಯಲ್ಲಿ ಪುರಸಭೆ ಮ್ಯಾನೇಜರ್ ಮಂಜುಳಾ, ಸಿಬ್ಬಂದಿಗ ಮಣಿಪ್ರಸಾದ್, ನಾಗೇಶ್, ನರಸಿಂಹ, ಪುರಸಭೆ ಸರ್ಕಾರದ ನಾಮ ನಿರ್ದೇಶನ ಸದಸ್ಯರಾದ ಎಚ್.ಎಲ್.ಮುರಳೀಧರ್, ಹಾರೋಹಳ್ಳಿ ಲಕ್ಷ್ಮೇಗೌಡ ಇತರರಿದ್ದರು.