ನಾಗಮಂಗಲ: ತಾಲೂಕಿಗೆ ಸೆ.10 ಮತ್ತು ಸೆ.11 ರಂದು ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದ ಹಲವು ನ್ಯೂನ್ಯತೆಗಳ ಆಧಾರದ ಮೇಲೆ 157 ಅಧಿಕಾರಿಗಳ ವಿರುದ್ಧ 22 ಸುಮೊಟೊ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ವಿವಿಧ ಇಲಾಖೆಗೆ ಸೇರಿದ 22 ಪ್ರಕರಣಗಳಿಗೆ ಸಂಬಂಧಿಸಿದಂತೆ 157 ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿ, ಡಿಡಿಪಿಇ, ಡಿಡಿಪಿಯು, ಜಿಲ್ಲಾ ಗಣಿ ಅಧಿಕಾರಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಜಿಲ್ಲಾ ಅಂಕಿತಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ, ತಾಪಂ ಇಒ, ಬಿಇಒ, ಪಿಎಸ್‌ಐ, ಎಆರ್‌ಟಿಒ, ಸಿಡಿಪಿಒ, ಖಜಾನಾಧಿಕಾರಿ, ಉಪ ತಹಸೀಲ್ದಾರ್, ರಾಜಸ್ವ ನಿರೀಕ್ಷಕರು, ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು, ವಾರ್ಡನ್ ಸೇರಿದಂತೆ ಒಟ್ಟು 157 ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳನ್ನು ಒಳಗೊಂಡಂತೆ ಎಲ್ಲ ಹಂತದ ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಸೆ.10 ಮತ್ತು ಸೆ.11 ರಂದು ನಾಗಮಂಗಲ ತಾಲೂಕಿಗೆ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಭೇಟಿ ನೀಡಿ ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಒಂದು ಕ್ರಷರ್ ಹಾಗೂ ವಿವಿಧ ಸರ್ಕಾರಿ ಇಲಾಖೆಗಳು ಸೇರಿದಂತೆ ಒಟ್ಟು 22 ಸ್ಥಳಗಳಿಗೆ ಭೇಟಿ ನೀಡಿದ್ದರು. ಭೇಟಿಯ ಸಂದರ್ಭದಲ್ಲಿ ಕಂಡುಬಂತಹದ ಲೋಪದೋಷಗಳ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
15 ವೈದ್ಯರ ವಿರುದ್ಧವೂ ಪ್ರಕರಣ: ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪರಿಶೀಲನೆ ನಡೆಸುವಂತೆ ಲೋಕಾಯುಕ್ತ ಪೊಲೀಸರನ್ನು ಉಪಲೋಕಾಯುಕ್ತರು ತಂಡ ರಚಿಸಿ ಭೇಟಿಯ ಸಂದರ್ಭ ತಪಾಸಣೆಗೆ ಕಳುಹಿಸಿದ್ದರು. ಆ ತಂಡ ನೀಡಿದ ವರದಿಯನ್ನಾಧರಿಸಿ ಮೂಲ ಸೌಕರ್ಯಗಳಿಲ್ಲದಿರುವುದು, ಅವಧಿ ಮುಗಿದ ಔಷಧಗಳ ದಾಸ್ತಾನು ಸೇರಿದಂತೆ ಗುರುತರವಾದ ಲೋಪಗಳು ಕಂಡುಬಂದಿರುವುದಾಗಿ ವರದಿ ನೀಡಿದ್ದರು. ಅದರ ಆಧಾರದ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ 13 ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬೆಟ್ಟಸ್ವಾಮಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
22 ಇಲಾಖೆಗಳ ವಿರುದ್ದ ಸುಮೊಟೊ: ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು 22 ಸ್ಥಳಗಳಿಗೆ ಭೇಟಿ ನೀಡಿದ್ದ ಎಲ್ಲ ಮುಖ್ಯಸ್ಥರು ಹಾಗೂ ಸಿಬ್ಬಂದಿ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ತಹಸೀಲ್ದಾರ್ ಕಚೇರಿ, ಖಜಾನೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿ, ಮೀನುಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಳ್ಳೂರು ನಾಡಕಚೇರಿ, ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ಳೂರು ಪಟ್ಟಣ ಪಂಚಾಯಿತಿ, ಸಮುದಾಯ ಆರೋಗ್ಯ ಕೇಂದ್ರ ಹಾಗೂ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನೆಲ್ಲಿಗೆರೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಅಲ್ಪಸಂಖ್ಯಾತರ ವಸತಿ ನಿಲಯ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯ, ಡಾ.ಅಂಬೇಡ್ಕರ್ ವಸತಿ ನಿಲಯ, ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಹಾಯಕ ಕಾರ್ಯಪಾಲಕ ಅಭಿಯಂತರು, ಪಂಚಾಯತ್ ರಾಜ್, ನಾಗಮಂಗಲ ಪುರಸಭೆ, ಎಪಿಎಂಸಿ, ಬುಡುಬುಡುಕೆ ಅಂಗನವಾಡಿ ಕೇಂದ್ರ, ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ಟೋನ್ ಕ್ರಷರ್ ಇವುಗಳ ವಿರುದ್ಧ ಒಟ್ಟು 22 ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲವು ವರದಿ ಕೇಳಿರುವ ಉಪಲೋಕಾಯುಕ್ತರು: ಅಕ್ರಮ ಬಡಾವಣೆಗಳು, ಸರ್ಕಾರಿ ಜಮೀನು ಒತ್ತುವರಿ, ಅಕ್ರಮ ಕ್ವಾರೆ ಮತ್ತು ಕ್ರಷರ್‌ಗಳು, ಅನುಮತಿ ಪಡೆದಿರುವ ವಿಸ್ತೀರ್ಣಕ್ಕಿಂತ ಹೆಚ್ಚು ಗಣಿಗಾರಿಕೆ, ತಾಲೂಕಿನ ಎಲ್ಲ ಅಂಗನವಾಡಿಗಳ ಮೂಲಸೌಕರ್ಯಗಳು, ದೂರು ದಾಖಲಾಗಿರುವ ಅಧಿಕಾರಿಗಳ 1 ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್, ನರೇಗಾ ಹಾಗೂ 15ನೇ ಹಣಕಾಸು ಯೋಜನೆಯ ಖರ್ಚಿನ ಹಣಪಾವತಿಯ ವಿವರ, ಪಿಟ್‌ನೆಸ್ ಮುಗಿದಿರುವ ವಾಹನಗಳ ವಿವರ ಹಾಗೂ ಅದರ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಿರುವ ವಿವರ, ಹಾಸ್ಟೇಲ್ ವಿದ್ಯಾರ್ಥಿಗಳ ದಾಖಲಾತಿ ವಿವರ ಸೇರಿದಂತೆ ವಿವಿಧ ಇಲಾಖೆಗಳಿಗೆ ಹಲವು ಮಾಹಿತಿಗಳನ್ನು ಉಪಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸುವಂತೆ ಇಲಾಖೆಯ ಮುಖ್ಯಸ್ಥರಿಗೆ ಆದೇಶದಲ್ಲಿ ಸೂಚಿಸಿದ್ದಾರೆ.