ಬಿಂಡಿಗನವಿಲೆ ಹೋಬಳಿಯ ಮಸಗೋನಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ಒಂಟಿ ಮನೆಯ ಬೀಗ ಮುರಿದು ಬಿರುವಿನಲ್ಲಿಟ್ಟಿದ್ದ ಸುಮಾರು 11 ಲಕ್ಷ ರೂ. ಮೌಲ್ಯದ 128ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಲಾಗಿದೆ.  
ಮಂಡ್ಯ

128ಗ್ರಾಂ ಚಿನ್ನಾಭರಣ ಕಳವು

ನಾಗಮಂಗಲ: ಬಿಂಡಿಗನವಿಲೆ ಹೋಬಳಿಯ ಮಸಗೋನಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ಒಂಟಿ ಮನೆಯ ಬೀಗ ಮುರಿದು ಬಿರುವಿನಲ್ಲಿಟ್ಟಿದ್ದ ಸುಮಾರು 11 ಲಕ್ಷ ರೂ. ಮೌಲ್ಯದ 128ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಲಾಗಿದೆ.
ಗ್ರಾಮದ ಪುಟ್ಟೇಗೌಡ ಅವರ ಪುತ್ರ ಉಮೇಶ್ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಸಂಬಂಧಿಕರ ಬೀಗರ ಔತಣ ಕೂಟಕ್ಕೆ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಉಮೇಶ್ ಕುಟುಂಬಸ್ಥರು ತೆರಳಿದ್ದರು. ಈ ವೇಳೆ ಮನೆಯ ಮುಂಬಾಗಿಲ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಬೀರುವಿನ ಬೀಗ ಒಡೆದು ಚಿನ್ನದ ಒಡವೆಗಳನ್ನು ದೋಚಿದ್ದಾರೆ. ಮಧ್ಯಾಹ್ನ ಕುಟುಂಬಸ್ಥರು ವಾಪಸ್ ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ಕೊಟ್ಟ ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ಹೇಮಂತ್‌ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಬಿಂಡಿಗನವಿಲೆ ಠಾಣೆಯ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.