ಶ್ರೀರಂಗಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಲತ್‌ನಲ್ಲಿ ಕಕ್ಷಿದಾರರು ತಮ್ಮ ವಕೀಲರ ಸಹಕಾರದೊಂದಿಗೆ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರು.
- ಶ್ರೀರಂಗಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಲೋಕ ಅದಾಲತ್
ಶ್ರೀರಂಗಪಟ್ಟಣ: ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ಕೈಗೆತ್ತಿಕೊಳ್ಳಲಾದ 1261 ಪ್ರಕರಣಗಳಲ್ಲಿ ಒಟ್ಟು 1031 ಪ್ರಕರಣಗಳನ್ನು ನ್ಯಾಯಾಧೀಶರು ರಾಜಿ-ಸಂಧಾನದ ಮೂಲಕ ಬಗೆಹರಿಸಿದರು.
3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತ್ಸ್ನಾ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಧೀಶ ಮೋಹನ್‌ಗೌಡ , ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಕೃಷ್ಣಮೂರ್ತಿ, ಪ್ರಧಾನ ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಹರೀಶ್‌ಕುಮಾರ್ ಹಾಗೂ ಅಪರ ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಹನುಮಂತರಾಯಪ್ಪ ಅವರ ನೇತೃತ್ವದಲ್ಲಿ 1261 ಪ್ರಕರಣಗಳನ್ನು ಸಂಬಂಧಪಟ್ಟ ವಕೀಲರು ಮತ್ತು ಕಕ್ಷಿದಾರರು ಸಮ್ಮುಖದಲ್ಲಿ ಕೈಗೆತ್ತುಕೊಳ್ಳಲಾಯಿತು. ಇವುಗಳಲ್ಲಿ 1031 ಪ್ರಕರಣಗಳನ್ನು ಇತ್ಯಾರ್ಥ ಪಡಿಸಲಾಯಿತು. ಇವುಗಳಲ್ಲಿ 512 ಪ್ರಕರಣಗಳು 5 ನ್ಯಾಯಾಲಯಗಳಲ್ಲಿ ಬಾಕಿ ಇದ್ದು, 519 ಉಳಿದ ವ್ಯಾಜ್ಯ ಪೂರ್ವ ಪ್ರಕರಣಗಳು ಮುಕ್ತಾಯಗೊಂಡಿವೆ.
ಅಪಘಾತ ಪ್ರಕರಣದ ಅರ್ಜಿದಾರ ಶಿವಕುಮಾರ್ ಎಂಬಾತ ನಡೆದಾಡುವ ಸ್ಥಿತಿಯಲ್ಲಿರದ ಕಾರಣ ಪರಿಸ್ಥಿತಿ ಅರಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಮೋಹನ್‌ಗೌಡ, ನ್ಯಾಯಾಲಯದ ಹೊರಭಾಗದಲ್ಲಿ ಕುಳಿತಿದ್ದ ಶಿವಕುಮಾರ್ ಬಳಿಗೆ ತೆರಳಿ ಅರ್ಜಿದಾರನಿಂದ ಮನವಿ ಆಲಿಸಿ ಸ್ಥಳದಲ್ಲೇ ರಾಜಿ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದರು.