ಜಿಲ್ಲೆ

ಮಂಡ್ಯವನ್ನು ಮತ್ತೊಂದು ಮಂಗಳೂರು ಮಾಡಲು ಬಿಡುವುದಿಲ್ಲ

ಮಂಜುನಾಥ ತಿಮ್ಮಯ್ಯ

ಮೈಸೂರು: ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿಯವರು ಮಂಡ್ಯದಲ್ಲಿ ಯಾವ ಪುರುಷಾರ್ಥಕ್ಕೆ ಹೋರಾಟ ಅಥವಾ ಬಂದ್ ಮಾಡುತ್ತಿದ್ದಾರೆ? ಮಂಡ್ಯವನ್ನು ಮತ್ತೊಂದು ಮಂಗಳೂರು ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹರಿಹಾಯ್ದರು.


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಜನರು ಇವರಿಗೆ ಕೊಟ್ಟ ಗೌರವಕ್ಕೆ ಪ್ರತಿಯಾಗಿ ಅಶಾಂತಿ, ಗಲಭೆಯನ್ನು ವಾಪಸ್ ಕೊಡುತ್ತಿದ್ದಾರಾ? ಎಂದು ಕಿಡಿಕಾರಿದರು.


ಧ್ವಜದ ವಿಚಾರದಲ್ಲಿ ಕರೆ ಕೊಟ್ಟಿರುವ ಮಂಡ್ಯ ಬಂದ್‌ಗೆ ಜನರೇ ತಿರುಗಿ ಬಿದ್ದಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ರಾಷ್ಟ್ರಧ್ವಜ ತೆಗೆಯಿರಿ ಎನ್ನುವುದು ಅವರ ಹೋರಾಟವೇ? ರೈತರಿಗಾಗಿ, ಕಾವೇರಿ ನೀರಿಗಾಗಿ ಹೋರಾಟ ಅಥವಾ ಬಂದ್ ಮಾಡಿದರೆ ನಾವೂ ಬೆಂಬಲಿಸುತ್ತೇವೆ. ಆದರೆ, ಧ್ವಜದ ವಿಚಾರದಲ್ಲಿ ಬಂದ್‌ಗೆ ಕರೆ ನೀಡಿರುವುದಕ್ಕೆ ಬಿಜೆಪಿ-ಜೆಡಿಎಸ್‌ನವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.


ಹಿಂದುತ್ವ ಎಂಬುದು ಅವರಿಗಿಂತ ನಮಲ್ಲೇ ಜಾಸ್ತಿ ಇದೆ. ಯಾರೋ ಪುಟ್ಟರಾಜನೋ, ಬೊಮ್ಮಪ್ಪನಿಂದಲೋ ಸುದ್ದಿಗೋಷ್ಠಿ ಮಾಡಿಸುತ್ತ ಹೋದರೆ ಜನರು ಪಾಠ ಕಲಿಸುತ್ತಾರೆ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.


ವಿನಯದ ಬಗ್ಗೆ ನಾನು ಕುಮಾರಸ್ವಾಮಿ ಅವರಿಂದ ಕಲಿಯಬೇಕಿಲ್ಲ. ಅವರಿಂದ ನಾನು ನಾಯಕನಾಗಿಲ್ಲ. ಎಚ್.ಡಿ.ದೇವೇಗೌಡರ ಮೇಲಿನ ಗೌರವದಿಂದಾಗಿ ಸುಮ್ಮನಿರುವೆ. ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲೇ ಉತ್ತರ ಕೊಡುತ್ತಿದ್ದೆ. ಗೌರವ ಬೇಡ ಎಂದಾದರೆ, ಬೇರೆ ರೀತಿಯಲ್ಲೇ ಮಾತನಾಡುತ್ತೇನೆ ಎಂದು ಗುಡುಗಿದರು.


ನಾನೇನು ಕುಮಾರಸ್ವಾಮಿ ಮನೆಯ ಋಣದಲ್ಲಿದ್ದೇನೆಯೇ? ಅವರ ಆಸ್ತಿ ತಿಂದಿದ್ದೇನೆಯೇ? ಅವರೇನು ನನ್ನ ಹಣೆಬರಹ ಬರೆಯುತ್ತಾರೆಯೇ? ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಭೈರೇಗೌಡ ಅವರನ್ನು ಜೆಡಿಎಸ್‌ನಿಂದ ಹೊರ ಕಳುಹಿಸಿದ್ದು ಯಾರೆಂದು ಕುಮಾರಸ್ವಾಮಿ ಹೇಳಲಿ ಎಂದು ಸವಾಲು ಹಾಕಿದರು.


ಮಂಡ್ಯದ ಅಭಿವೃದ್ಧಿ ಬಗ್ಗೆ ಜೆಡಿಎಸ್ ಚರ್ಚೆಗೆ ಆಹ್ವಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾಚಿಕೆ ಆಗಬೇಕು ಅವರಿಗೆ. ಒಂದು ಅಂಗನವಾಡಿ ಕಟ್ಟಡ ಕಟ್ಟಲೂ ಆಗದವರು ಏನು ಚರ್ಚಿಸುತ್ತಾರೆ? ಅವರದ್ದು ಕೇವಲ ಹಿಟ್ ಆ್ಯಂಡ್ ರನ್ ಕೇಸ್. ಚರ್ಚೆ ಮಾಡುವುದಿದ್ದರೆ ಮಂಡ್ಯಕ್ಕೆ ಬರಲಿ ಅಥವಾ ವಿಧಾನಮಂಡಲ ಅಧಿವೇಶನದಲ್ಲೇ ಚರ್ಚೆ ನಡೆಸಲು ನಾನು ಸಿದ್ಧ. ಮಂಡ್ಯಕ್ಕೆ ಅವರ ಕೊಡುಗೆ ಶೂನ್ಯ. ಅಭಿವೃದ್ಧಿ ಮಾಡಿದ್ದರೆ ಆ ಪಕ್ಷದವರು ಏಕೆ ಸೋಲುತ್ತಿದ್ದರು? ಎಂದು ಪ್ರಶ್ನಿಸಿದರು.