ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯವನ್ನು ‘ವಿಶ್ವ ಗಂಗೋತ್ರಿ ಕ್ಯಾಂಪಸ್’ ಮನುಜಮತ-ವಿಶ್ವಪಥ ಎಂದು ನಾಮಕರಣ ಮಾಡಲಾಗಿದ್ದು, ಶಾಸಕ ರವಿಕುಮಾರ್ ಗಣಿಗ ಅಧಿಕೃತವಾಗಿ ಘೋಷಣೆ ಮಾಡಿದರು.
ನಗರದ ವಿವಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಎರಡು ಕೋರ್ಸ್‌ಗೆ ಚಾಲನೆ, ಇಂಡಿಯನ್ ಬ್ಯಾಂಕ್ ಕೌಂಟರ್ ಉದ್ಘಾಟನೆ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ವಿವಿಗೆ ನೂತನ ಹೆಸರನ್ನು ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ರಾಜ್ಯಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಬಿ.ಹೊಸೂರು ಕಾಲನಿಯಲ್ಲಿ ಮುರಾರ್ಜಿ ವಸತಿ ದೇಸಾಯಿ ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ. ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಸಜ್ಜಾಗಿದೆ. ಅಲ್ಲಿ ಅಕ್ಕಮಹಾದೇವಿ ವಿವಿ ಇದೆ. ಒಟ್ಟಾರೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತಹ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದರು.
ಮಂಡ್ಯ ವಿಶ್ವವಿದ್ಯಾನಿಲಯವಿರುವ ನಗರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತವನ್ನು ಎರಡು ಕೋಟಿ ರೂ ವೆಚ್ಚದಲ್ಲಿ ಹಾಗೂ ಫ್ಯಾಕ್ಟರಿ ವೃತ್ತವನ್ನು ಒಂದು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ರಸ್ತೆಯ ಪಕ್ಕದ ಫುಟ್‌ಪಾತ್ ಅನ್ನು ಸೌಂದರ್ಯಗೊಳಿಸುವ ನಿಟ್ಟಿನಲ್ಲಿ ಗಿಡ ನೆಡಲಾಗುತ್ತಿದೆ. ಸಿಎಂ ವಿಶೇಷ ಅನುದಾನದಲ್ಲಿ 20 ಕೋಟಿ ರೂಗಳನ್ನು ನವ ಮಂಡ್ಯ ನಗರ ನಿರ್ಮಾಣಕ್ಕೆ ಖರ್ಚು ಮಾಡಲಾಗುತ್ತಿದೆ. ಇದರೊಟ್ಟಿಗೆ ಕ್ರೀಡಾಪಟುಗಳಿಗೆ ಅನುಕೂಲವಾಗಲಿ ಹಾಗೂ ಕ್ರೀಡಾಸಕ್ತಿ ಬೆಳೆಯಬೇಕೆನ್ನುವ ಉದ್ದೇಶದಿಂದ ಕ್ರೀಡಾಂಗಣಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ವಿವಿಯ ಉಪ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ, ಕುಲಸಚಿವ ಪ್ರೊ.ಚಂದ್ರಕಿರಣ್, ಮೌಲ್ಯಮಾಪನ ಕುಲಸಚಿವ ಪ್ರೊ.ಯೋಗನರಸಿಂಹಚಾರಿ, ಉಪ ಕುಲಸಚಿವ ಪ್ರೊ.ಎಂ.ವೈ.ಶಿವರಾಂ, ಪ್ರಾಂಶುಪಾಲೆ ಬಿ.ಸ್ವರ್ಣ, ಸಿಂಡಿಕೇಟ್ ನಾಮ ನಿರ್ದೇಶಿತ ಸದಸ್ಯ ನಾಗರಾಜ್ ಇತರರಿದ್ದರು.
ಎಂ.ಸಿ.ಎ ಮತ್ತು ಎಂ.ಬಿ.ಎ ಕೋರ್ಸ್‌ಗೆ ಚಾಲನೆ
ಮಂಡ್ಯ ವಿಶ್ವವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನಿಂದ ತಾಂತ್ರಿಕ ಹಾಗೂ ನಿರ್ವಹಣಾ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯಿಂದ ಅನುಮೋದನೆ ಪಡೆದು ಎಂ.ಸಿ.ಎ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಆರಂಭಿಸಲಾಗಿದೆ.
ಜೂ.29ರಂದು ಎಂ.ಸಿ.ಎ ಮತ್ತು ಎಂ.ಬಿ.ಎ ಪದವಿಗಳ ಆರಂಭಕ್ಕೆ ಅನುಮೋದನೆ ದೊರೆತಿದೆ. ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ಮಾಡಿದವರು ಎಂಸಿಎ ಪದವಿಯ ಪ್ರವೇಶ ಪಡೆಯಬಹುದಾಗಿದೆ. ಬಿ.ಕಾಂ, ಬಿ.ಬಿ.ಎ ಸೇರಿದಂತೆ ಯಾವುದೇ ಪದವಿ ಪಡೆದವರು ಎಂ.ಬಿ.ಎ ಪದವಿಗೆ ಪ್ರವೇಶಾತಿ ಪಡೆಯಬಹುದಾಗಿದೆ. ಎಂ.ಬಿ.ಎ ಪದವಿಗೆ ಸೇರಲು ರಾಜ್ಯದವರಿಗೆ 75,000 ರೂ, ಹೊರ ರಾಜ್ಯದವರಿಗೆ 1,12,000 ರೂ ಶುಲ್ಕವಿದೆ. ಎಂ.ಸಿ.ಎ ಪದವಿಗೆ ರಾಜ್ಯದವರೆಗೆ 49,512 ರೂ ಹಾಗೂ ಹೊರ ರಾಜ್ಯದವರಿಗೆ 75,930 ರೂ ಶುಲ್ಕ ನಿಗದಿಪಡಿಸಲಾಗಿದೆ. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು 23,678 ರೂ ವಿನಾಯಿತಿ ಪಡೆಯಬಹುದಾಗಿದೆ.