ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯ ಉನ್ನತ ಮಟ್ಟಕ್ಕೇರಲು ಸರ್ಕಾರದಿಂದ ಎಲ್ಲ ರೀತಿಯಲ್ಲೂ ಸಹಕರಿಸಲಾಗುವುದು. ಅದಕ್ಕೆ ತಕ್ಕಂತೆ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.
ನಗರದ ಮಂಡ್ಯ ವಿವಿಯ ಗ್ರಂಥಾಲಯದಲ್ಲಿ ಆ್ಯಪಲ್ ಲ್ಯಾಬ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಆ್ಯಪಲ್ ಲ್ಯಾಬ್ ಕರ್ನಾಟಕದಲ್ಲೇ ಮೊದಲನೆಯದಾಗಿದೆ. ಮಂಡ್ಯ ವಿವಿ ತಂತ್ರಜ್ಞಾನದಲ್ಲಿ ನೆರೆಯ ಜಿಲ್ಲೆಯ ವಿವಿಗಳಿಗಿಂತ ಸುಸಜ್ಜಿತವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಹಕರಿಸುತ್ತದೆ. ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಜಿಲ್ಲೆ ಹಾಗೂ ವಿಶ್ವವಿದ್ಯಾಲಯಕ್ಕೆ ಘನತೆ ತರಬೇಕು ಎಂದರು.
ವಿದ್ಯಾರ್ಥಿಗಳು ಗುರಿ ಮತ್ತು ಗುರು ಎರಡು ಇದ್ದರೆ ಏನಾದರೂ ಸಾಧನೆ ಮಾಡಬಹುದು. ತಂದೆ ತಾಯಿ ಒಳ್ಳೆದಾಗಲಿ ಎಂದು ಬಯಸಿದರೆ, ಗುರುಗಳು ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸಿ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ವಿವಿಯ ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ಆ್ಯಪಲ್ ಲ್ಯಾಬ್ನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ಜಿಲ್ಲೆಯ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಶಕ್ತೀಕರಣಗೊಳಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಆ್ಯಪಲ್ ಲ್ಯಾಬ್ ಸಹಕಾರಿ ಎಂದರು.
ಸಂಪನ್ಮೂಲ ವ್ಯಕ್ತಿ ಪಿ.ರಾಜೀವ್ ಮತ್ತು ಫಣೀಂದರ್ ಅವರು ಉನ್ನತೀಕರಿಸಿದ ಆ್ಯಪಲ್ ಲ್ಯಾಬ್ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಕುಲಸಚಿವ ಡಾ.ನಾಗರಾಜ್ ಜಿ.ಚೊಳ್ಳ, ಡಾ.ರಂಗರಾಜು, ಸಿಂಡಿಕೇಟ್ ಸದಸ್ಯರಾದ ನಾಗರಾಜು, ಬಸವರಾಜ್, ಆ್ಯಪಲ್ ಇನ್ಫೋಟೆಕ್‌ನ ಮೋಹಿತ್ ಹೆಗ್ಡೆ ಇತರರಿದ್ದರು.