ಜಿಲ್ಲೆ

ಮಳವಳ್ಳಿಯಲ್ಲಿ ಜನರಿಂದಲೇ ಸ್ವಯಂಲಾಕ್‌ಡೌನ್

Mandya

ತಾಲೂಕು ಕಚೇರಿ, ಗ್ರಾಮಗಳ ಪ್ರವೇಶಕ್ಕೆ ನಿರ್ಬಂಧ

ಮಳವಳ್ಳಿ: ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಹಾಗೂ ವಿವಿಧ ಗ್ರಾಮಗಳಲ್ಲಿ ಜನರು ಸ್ವಯಂ ಲಾಕ್‌ಡೌನ್ ಮಾಡಿಕೊಂಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿಗೆ ಪ್ರತಿದಿನ ಕಂದಾಯ ಇಲಾಖೆಯ ಕೆಲಸಗಳಿಗೆ ಜನರು ಬಂದು ಕಚೇರಿಯಲ್ಲಿ ಅಡ್ಡಾಡುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ. ಸಿಬ್ಬಂದಿಯ ಹಿತದೃಷ್ಟಿಯಿಂದ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಹಸೀಲ್ದಾರ್ ಚಂದ್ರಮೌಳಿ ತಿಳಿಸಿದ್ದಾರೆ.
ತುರ್ತು ಕೆಲಸವಿರುವವರು ಕಚೇರಿಯ ಮುಖ್ಯದ್ವಾರದಲ್ಲಿ ನಿಂತು ಒಳಗಿರುವ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇತರ ಯಾವುದೇ ಸಣ್ಣಪುಟ್ಟ ಕೆಲಸಗಳಿಗೆ ಕರೊನಾ ನಿಯಂತ್ರಣಕ್ಕೆ ಬರುವವರೆಗೂ ಕಚೇರಿಗೆ ಬಾರದಂತೆ ಜನಸಾಮಾನ್ಯರಲ್ಲಿ ಮನವಿ ಮಾಡಲಾಗಿದೆ.
ಹಳ್ಳಿಗಳ ಪ್ರವೇಶ ನಿರ್ಬಂಧ: ತಾಲೂಕಿನ ಕೆಲ ಹಳ್ಳಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಆತಂಕಕ್ಕೀಡಾಗಿರುವ ಜನರು ತಮ್ಮ ಗ್ರಾಮಗಳಿಗೆ ಹೊರಗಿನಿಂದ ಬರುವವರಿಗೆ ಸ್ವಯಂ ನಿರ್ಬಂಧ ವಿಧಿಸಿ ಮುಖ್ಯದ್ವಾರಗಳಲ್ಲಿ ಮರಗಳನ್ನು ಕಟ್ಟಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿದ್ದಾರೆ.
ಹೋಬಳಿ ಕೇಂದ್ರ ಹಲಗೂರಿನಲ್ಲಿ 15 ದಿನಗಳವರೆಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 11 ರವರೆಗೆ ಅವಕಾಶ ನೀಡಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ವಾಸವಿದ್ದ ತಾಲೂಕಿನ ಬಹುತೇಕ ಗ್ರಾಮಗಳ ಜನರು ಸ್ವಗ್ರಾಮಗಳಿಗೆ ವಾಪಸಾಗುತ್ತಿರುವುದರಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಜೆ.ಸಿ.ಪುರ ಹಾಗೂ ಸಿರಮಳ್ಳಿ ಗ್ರಾಮಕ್ಕೆ ಹೊರಗಿನಿಂದ ಬರುವ ಗ್ರಾಮಸ್ಥರಿಗೂ ಪ್ರವೇಶಕ್ಕೆ ಕಡಿವಾಣ ಹಾಕಿ, ಬೇಲಿ ನಿರ್ಮಿಸಿ ಯಜಮಾನರು ಹಾಗೂ ಯುವಕರ ತಂಡ ದ್ವಾರದಲ್ಲಿ ಕಾವಲು ಕಾಯುತ್ತಿದ್ದಾರೆ.
ಕಣ್ಣು ತಪ್ಪಿಸಿ ಗ್ರಾಮ ಪ್ರವೇಶಿಸುವವರಿಗೆ 5 ಸಾವಿರ ರೂ. ದಂಡ ವಿಧಿಸುವುದಾಗಿ ಡಂಗೂರ ಸಾರಿಸುವ ಮೂಲಕ ಕರೊನಾ ಕರಿನೆರಳು ತಮ್ಮ ಹಳ್ಳಿಯ ಮೇಲೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.