ಜಿಲ್ಲೆ

ವಿವಿಧೆಡೆ ಚಿರತೆ ಪ್ರತ್ಯಕ್ಷ

ಮಂಡ್ಯ/ಕೆ.ಎಂ.ದೊಡ್ಡಿ: ಕರೊನಾ ಸೋಂಕಿನ ಆತಂಕದಲ್ಲಿ ಇರುವ ಜನರಿಗೆ ಕಾಡಿನಿಂದ ನಾಡಿಗೆ ಬಂದು ಬೀಡು ಬಿಟ್ಟಿರುವ ಚಿರತೆಗಳು ಭಯ ಬೀಳಿಸುತ್ತಿರುವುದು ದಿನೇದಿನೆ ಹೆಚ್ಚಾಗುತ್ತಿದೆ.


ತಾಲೂಕಿನ ಹುಲಿಕೆರೆ, ಮಾಚಹಳ್ಳಿ ಸುತ್ತಮುತ್ತ ಕೆಲ ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕೆಲ ಸಾಕುಪ್ರಾಣಿಗಳು ಹಾಗೂ ಬೀದಿ ನಾಯಿಗಳನ್ನು ತಿಂದು ಹಾಕಿವೆ. ಜಮೀನುಗಳ ಬಳಿ ಚಿರತೆಗಳು ಕಾಣುತ್ತಿರುವುದರಿಂದ ರೈತರು ಜಮೀನುಗಳಿಗೆ ತೆರಳಿ, ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಭಯಪಡುವಂತಾಗಿದೆ. ಚಿರತೆ ಇರುವ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನು ಇಡಬೇಕೆಂದು ರೈತರು ಒತ್ತಾಯಿಸಿದ್ದಾರೆ.


ಅಂತೆಯೇ, ಮಂಗಳವಾರ ಬೆಳಗ್ಗೆ 10.30ರಲ್ಲಿ ಕೆ.ಎಂ.ದೊಡ್ಡಿ ಸಮೀಪದ ಶಿಂಗಟಗೆರೆ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಮಂಡ್ಯ- ಕೆ.ಎಂ.ದೊಡ್ಡಿ ರಸ್ತೆಯಲ್ಲಿ ಸೂನಗಹಳ್ಳಿಯ ಇಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಳ್ಳವೊಂದರ ಬಳಿ ಬಂದ ಚಿರತೆ ಜನರನ್ನು ಕಂಡು ಹಳ್ಳಕ್ಕೆ ನೆಗೆದು ಸೇತುವೆ ಕೆಳೆಗೆ ನುಗ್ಗಿ ಕಬ್ಬಿನ ಗದ್ದೆಯೊಳಗೆ ಸೇರಿಕೊಂಡಿದೆ.


ಸುಮಾರು ಮೂರ್ನಾಲ್ಕು ತಿಂಗಳಿಂದ ಕಡಿಲುವಾಗಿಲು, ಲಕ್ಷ್ಮೇಗೌಡನದೊಡ್ಡಿ, ಕೆಂಪೇಗೌಡನದೊಡ್ಡಿ, ಮಾದರಹಳ್ಳಿ, ಹರಳಹಳ್ಳಿ, ಶೆಟ್ಟಹಳ್ಳಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಚಿರತೆಯನ್ನು ಹಲವು ಜನರು ಗಮನಿಸಿದ್ದಾರೆ.


ಈ ಮೊದಲು ಮುಂಜಾನೆ ಅಥವಾ ರಾತ್ರಿ ವೇಳೆ ಸಂಚರಿಸಿ ಜನರಿಗೆ ಕಾಣುತ್ತಿದ್ದ ಚಿರತೆ ಎಂದು ಬೆಳಗ್ಗೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಮಂಡ್ಯ-ಕೆ.ಎಂ.ದೊಡ್ಡಿ ರಸ್ತೆಯ ಜಿಲ್ಲಾ ಹೆದ್ದಾರಿಯಾಗಿದ್ದು, ನಿತ್ಯ ಸಾವಿರಾರು ಜನತೆ ವಿವಿಧ ಕಡೆಗಳಿಗೆ ಸಂಚರಿಸುತ್ತಾರೆ. ಈಗ ಜನತೆ ಆತಂಕದಿಂದ ಸಂಚರಿಸುವಂತಾಗಿದೆ.


ಶಿಂಗಟಗೆರೆ ಗ್ರಾಮದಿಂದ ಕೇವಲ 200 ಮೀಟರ್ ದೂರದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕದಿಂದ ಕಾಲ ನೂಕುವಂತಾಗಿದೆ. ಈ ಮೊದಲು ಹರಳಹಳ್ಳಿಯ ಬೀದಿಗಳಲ್ಲಿ ಚಿರತೆ ಸಂಚರಿಸಿದ್ದು, ಹಲವು ದಿನಗಳ ಕಾಲ ಜನತೆ ರಾತ್ರಿ ವೇಳೆ ಬಾಗಿಲು ತೆರೆಯಲು ಹೆದರುವಂತಾಗಿತ್ತು. ಚಿರತೆ ಮತ್ತೆ ಕಾಣಿಸಿಕೊಂಡಿದ್ದರಿಂದ ಸುತ್ತಮುತ್ತಲ ಎಲ್ಲ ಗ್ರಾಮಗಳಲ್ಲಿ ಮತ್ತೇ ಆತಂಕ ಶುರುವಾಗಿದೆ.


ಚಿರತೆ ಕಂಡ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.