ಜಿಲ್ಲೆ

ಕ್ರೀಡಾ ಅಂಕಣ ಸೇವೆಗೆ

ಎ. ಆರ್. ರಘುರಾಮ


ಕೆ.ಎಂ.ದೊಡ್ಡಿ : ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಗಳಿಗೂ ಹೆಚ್ಚು ಒತ್ತು ನೀಡಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಶಾಸಕ ಕದಲೂರು ಉದಯ್ ಹೇಳಿದರು.
ಸಮೀಪದ ಕೊಕ್ಕರೆಬೆಳ್ಳೂರು ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿರುವ 14- 17 ವಯೋಮಾನದ ಬಾಲಕ, ಬಾಲಕಿಯರ ಖೋಖೋ ಪಂದ್ಯಾವಳಿಯಲ್ಲಿ ಧ್ವಜಾರೋಹಣ ನೆರೆವೇರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಕ್ರೀಡಾ ಉತ್ಸಾಹ ಹೆಚ್ಚಿಸುವ ಹಾಗೂ ಹೊಸ ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟಗಳು ಸಹಕಾರಿಯಾಗಿದೆ, ಖೋಖೋ ಉತ್ತಮ ಆಟವಾಗಿದ್ದು, ಕೂಟವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನಾಗಿ ಸ್ವೀಕರಿಸಬೇಕು, ನಿರಂತರ ಅಭ್ಯಾಸದಿಂದ ಗೆಲುವನ್ನು ಸುಲಭವಾಗಿ ಪಡೆಯಬಹುದು. ಪಾಲಕರು ಮತ್ತು ಶಿಕ್ಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹ ನೀಡಬೇಕೆಂದು ಉದಯ್ ಹೇಳಿದರು.
ಅಂಕಣಗಳ ಉದ್ಘಾಟನೆ: 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಖೋಖೋ, ಕಬಡ್ಡಿ, ಬಾಸ್ಕೆಟ್ಬಾಲ್ ಮತ್ತು ವಾಲಿಬಾಲ್ ಅಂಕಣಗಳನ್ನು ಇದೇ ಸಂದರ್ಭ ಅತಿಥಿಗಳು ಉದ್ಘಾಟಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ 36 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.