ಜಿಲ್ಲೆ

ವಾವ್ಹ್, ಎಷ್ಟೊಂದು ಸುಂದರ!

ಮಂಡ್ಯ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ವನದಲ್ಲಿ ಚೆಂದದ ಲೋಕವೊಂದು ಸೃಷ್ಟಿಯಾಗಿದೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶಕ್ಕೆ ಭಾನುವಾರ ಚಾಲನೆ ದೊರೆತಿದ್ದು, ಹೊಸದೊಂದು ಹೂವಿನ ಲೋಕವೇ ಅನಾವರಣಗೊಂಡಿದೆ. ಈ ಹಿಂದಿನ ಕಾರ್ಯಕ್ರಮಕ್ಕೆ ಹೋಲಿಸಿದರೆ ಈ ಬಾರಿ ಇನ್ನಷ್ಟು ಚೆಂದ ಇರುತ್ತದೆ ಎನ್ನುವ ಸಾರ್ವಜನಿಕರ ನಿರೀಕ್ಷೆಯನ್ನು ಮೀರಿಸಿದೆ.

ಶ್ರೀರಂಗನಾಥಸ್ವಾಮಿ ಹೈಲೆಟ್: ಈ ಬಾರಿಯ ಪ್ರದರ್ಶನದಲ್ಲಿ ಜನರನ್ನು ಹೆಚ್ಚು ಆಕರ್ಷಿಸುತ್ತಿರುವುದು ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿಯ ಮಾದರಿ. ಪಾಂಡವಪುರ ತಾಲೂಕು ಡಿಂಕಾ ಶೆಟ್ಟಿಹಳ್ಳಿ ಗ್ರಾಮದವರೂ ಆದ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಭಿಲಾಷ್ ನೇತೃತ್ವದ ತಂಡ ಮಾದರಿಯನ್ನು ನಿರ್ಮಿಸಿದೆ. ಐದು ಜನರ ತಂಡ ಎಂಟು ದಿನ ಹಗಲು-ರಾತ್ರಿ ಕೆಲಸ ಮಾಡಿ ಅದ್ಭುತ ಕಲಾಕೃತಿ ನಿರ್ಮಿಸಿದ್ದಾರೆ.ಥರ್ಮಕೋಲ್, ಬಟ್ಟೆ ಬಳಸಿ ಇದನ್ನು ಮಾಡಲಾಗಿದೆ.

ಕಾವೇರಿ ವನದಲ್ಲಿ ಹಸಿರು ಗಿಡಗಳ ಮಧ್ಯೆ ನಿರ್ಮಿಸಿರುವ ಬೃಹದಾಕಾರದ ಮಾದರಿಯು ಫಲಪುಷ್ಪ ಪ್ರದರ್ಶನದಲ್ಲಿ ಹೈಲೆಟ್ ಆಗಿದೆ. ಪ್ರದರ್ಶನಕ್ಕೆ ಬಂದವರು ಕಲಾಕೃತಿ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಜಯಚಾಮರಾಜೇಂದ್ರ ಒಡೆಯರ್ ಅವರ ದರ್ಬಾರ್ ಮಾದರಿ, ಮೈಸೂರು ದಸರಾ ಮಾದರಿ, ಶಿವ ತಪಸ್ಸಿಗೆ ಕುಳಿತ ಮಾದರಿ, ತಾಯಿ ಮಗುವಿನ ಕಲಾಕೃತಿ, ಯೋಗ ನರಸಿಂಹಸ್ವಾಮಿಯ ಮರಳು ಕಲಾಕೃತಿ, ಚಂದ್ರಯಾನ ಮಾದರಿ, ಕೆಆರ್‌ಎಸ್ ಮಾದರಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಗ್ರಾಮೀಣ ಭಾಗದ ಸಂಕ್ರಾಂತಿ ಸಂಭ್ರಮ, ಮಹಾತ್ಮ ಗಾಂಧೀಜಿ ಅವರು ನೂಲು ನೇಯುತ್ತಿರುವುದು, ಐದು ತಲೆಯ ಹಾವಿನ ಮಾದರಿ ಸೇರಿದಂತೆ ಹಲವು ಕಲಾಕೃತಿಗಳು ಗಮನಸೆಳೆಯುತ್ತಿವೆ.

ತರಕಾರಿಯಲ್ಲಿ ಗಣ್ಯರ ಚಿತ್ರ: ಹಲವು ತರಕಾರಿಗಳಲ್ಲಿ ವಿಶೇಷ ಕೆತ್ತನೆ ಮಾಡಲಾಗಿದೆ. ಈ ಪೈಕಿ ಗಣ್ಯರಾದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ನರೇಂದ್ರ ಮೋದಿ, ಡಾ.ರಾಜ್‌ಕುಮಾರ್, ಡಾ.ಶಿವಕುಮಾರ ಸ್ವಾಮೀಜಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಶ್ರೀಗಳು, ಅಂಬರೀಷ್, ದರ್ಶನ್, ಯಶ್ ಅವರ ಮಾದರಿಗಳು ಆಕರ್ಷಕವಾಗಿವೆ.

ಜಿಲ್ಲೆಯ ಪ್ರವಾಸಿ ತಾಣದ ಬಗ್ಗೆಯೂ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದೊಂದಿಗೆ ಪ್ರವಾಸಿ ತಾಣದ ಮಾದರಿಯನ್ನು ಮಾಡಲಾಗಿದೆ. ರಂಗನತಿಟ್ಟು, ಶಿವಪುರ ಸತ್ಯಾಗ್ರಹ ಸೌಧ, ಗಗನಚುಕ್ಕಿ, ಕೆಆರ್‌ಎಸ್, ಕಸದಿಂದ ರಸ ಹೀಗೆ ಹಲವು ಮಾದರಿಗಳಿವೆ. ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳಲು ಅನುಕೂಲವಾಗುವಂತೆ ಒಂದಷ್ಟು ಕಡೆ ಹೂವಿನಲ್ಲಿ ಫ್ರೇಮ್‌ಗಳನ್ನು ಮಾಡಲಾಗಿದೆ.
ಫಲಪುಷ್ಪ ಪ್ರದರ್ಶನಕ್ಕೆ ಬಂದವರಿಗೆ ಬಾಯಿ ಚಪ್ಪರಿಸಲು ವಿಭಿನ್ನ ಬಗೆಯ ತಿಂಡಿಗಳು ಲಭ್ಯವಿದೆ. ವಿವಿಧೆಡೆಯಿಂದ ಆಗಮಿಸಿರುವ ಮಾರಾಟಗಾರರು ಹಲವು ತಿಂಡಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ.

ರೈತರಿಗೆ ಸಿಗಲಿದೆ ಮಾಹಿತಿ: ಫಲಪುಷ್ಪ ಪ್ರದರ್ಶನದಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಇಲಾಖಾವಾರು ಮಳಿಗೆ ಸ್ಥಾಪಿಸಲಾಗಿದೆ. ಪ್ರಮುಖವಾಗಿ ರೈತರನ್ನೇ ಕೇಂದ್ರವನ್ನಾಗಿಟ್ಟುಕೊಂಡು ಮೀನುಗಾರಿಕೆ, ತೋಟಗಾರಿಕೆ, ಕೃಷಿ, ಪಶುಪಾಲನಾ ಇಲಾಖೆ ಮತ್ತು ವಿ.ಸಿ ಫಾರಂ ಕೃಷಿ ಸಂಶೋಧನಾ ಕೇಂದ್ರದಿಂದ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿದ್ದು, ರೈತರು ಕೃಷಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಪಡೆಯಬಹುದು. ಜತೆಗೆ ಸಾವಯವ ಮಾರುಕಟ್ಟೆಯೂ ಇದ್ದು, ತರಕಾರಿ ಮತ್ತು ಹಣ್ಣುಗಳ ಮಾರಾಟ ನಡೆಯುತ್ತಿದೆ. ಒಟ್ಟಾರೆ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಶ್ರಮದಿಂದ ಫಲಪುಷ್ಪ ಪ್ರದರ್ಶನ ಉತ್ತಮವಾಗಿ ಮೂಡಿಬಂದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಂತೆಯೇ ಫೆ.2ರವರೆಗೆ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ತಪ್ಪದೇ ಭೇಟಿ ನೀಡಿ ಚೆಂದದ ಲೋಕವನ್ನು ಕಣ್ತುಂಬಿಕೊಳ್ಳಬಹುದು.