ನಾಗಮಂಗಲ: ದೇಶದಾದ್ಯಂತ ಮಂಡ್ಯ ಜಿಲ್ಲೆ ರೈತ ಹೋರಾಟಗಳಿಗೆ ಹೆಸರುವಾಸಿಯಾಗಿತ್ತು. ಆದರೆ ಇತ್ತೀಚೆಗೆ ರೈತ ಹೋರಾಟದ ಬದಲಿಗೆ ಕೋಮುಗಲಭೆಗಳಿಗೆ ದೇಶದಾದ್ಯಂತ ಚರ್ಚೆಯಾಗುತ್ತಿರುವುದು ದುರದೃಷ್ಟಕರ. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ನಾಗಮಂಗಲ ಪಟ್ಟಣದಲ್ಲಿ ಕೋಮುಗಲಭೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಮಾತನಾಡಿದರು.
ಪೊಲೀಸರ ಮುಂದೆಯೇ ತಲ್ವಾರ್ ಹಿಡಿದು ರಸ್ತೆಗೆ ಬಂದು ಹಲ್ಲೆ ಮಾಡಲು ಮುಂದಾಗಿದ್ದಾರೆ. ಪೊಲೀಸರು ಈ ಎಲ್ಲವನ್ನು ನೋಡಿಕೊಂಡು ಮೂಕಪ್ರೇಕ್ಷಕರಾಗಿ ಕುಳಿತಿದ್ದಾರೆ ಎಂದರೆ ಇದಕ್ಕೆ ಆಡಳಿತ ಪಕ್ಷದ ಒತ್ತಡ ಕಾರಣ. ಕೆರಗೋಡಿನಲ್ಲಿ ಹನುಮಧ್ವಜದ ವಿಚಾರವಾಗಿ ಇದೇ ರೀತಿ ಹಿಂದು ವಿರೋಧಿ ಧೋರಣೆಯನ್ನು ಕಾಂಗ್ರೆಸ್ ಸರ್ಕಾರ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಬಂದನಂತರ ದೇಶದ್ರೋಹಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಈಗ ನಾಗಮಂಗಲ ರಸ್ತೆಯಲ್ಲಿ ಬಂದಿರುವವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಹಿಂದು ಶಾಸಕರು, ಮಂತ್ರಿಗಳ ಮನೆಗಳಿಗೂ ತಲ್ವಾರ್, ಲಾಂಗ್ ಹಿಡಿದು ನುಗ್ಗುವ ದಿನಗಳು ದೂರವಿಲ್ಲ. ಆದ್ದರಿಂದ ನಿಮ್ಮ 420 ರಾಜಕಾರಣ ಬಿಟ್ಟು ಅನ್ಯಾಯವಾಗಿರುವವರ ಪರ ನಿಂತು, ದೇಶದ್ರೋಹಿಗಳನ್ನು ಮಟ್ಟಹಾಕುವ ಕೆಲಸ ಮಾಡಬೇಕು. ಹಿಂದುಗಳ ಮೇಲೆ ಪ್ರಕರಣ ದಾಖಲಿಸಿರುವುದನ್ನು ಕೂಡಲೇ ಕೈಬಿಡಬೇಕು. ಹಾನಿಗೊಳಗಾಗಿರುವವರಿಗೆ ತಕ್ಷಣ ಸರ್ಕಾರ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.