ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರ ಪದೇಪದೆ ಹಿಂದು ಧಮೀರ್ಯರ ಮೇಲೆ ದೌರ್ಜನ್ಯ ಎಸಗುತ್ತಿದೆ. ಮಂಡ್ಯದಲ್ಲಿ ಬಿಜೆಪಿಯವರು ಏರಿಸಿದ್ದ ಹನುಮ ಧ್ವಜವನ್ನು ಅಧಿಕಾರಿಗಳ ಮೂಲಕ ತೆರವು ಮಾಡಿಸಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜನ್ನು ಖಂಡಿಸಿದರು.
ಹೋರಾಟದ ಎಚ್ಚರಿಕೆ
ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲೂ ಸಿಎಂ ಸಿದ್ದರಾಮಯ್ಯ ಅವರು ಹಿಂದುಗಳಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಪದೇಪದೆ ನಮ್ಮನ್ನು ಕೆಣಕಿದರೆ ನಾವು ಸುಮ್ಮನೆ ಇರುವುದಿಲ್ಲ. ನಮಗೂ ಶಕ್ತಿ ಇದೆ, ದೊಡ್ಡ ಕಾರ್ಯಕರ್ತರ ಬಲ ಇದೆ. ರಾಜ್ಯ ಸರ್ಕಾರ ಮತ್ತೆ ಇಂತಹ ಧೋರಣೆ ಮುಂದುವರಿಸಿದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದುರಹಂಕಾರಿ ಸಿಎಂ
ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ ಶೆಟ್ಟಿ ಮಾತನಾಡಿ, ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಏರಿಸಿರುವ ಹನುಮ ಧ್ವಜವನ್ನು ಇಳಿಸುತ್ತಾರೆಂದರೆ ಅವರಿಗೆ ಎಷ್ಟು ದುರಹಂಕಾರ ಇದ್ದಿರಬಹುದು? ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಮಸೀದಿ ಮೇಲೆ ಹಾರಿಸಿರುವ ಹಸಿರು ಧ್ವಜ ತೆರವು ಮಾಡಿಸಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸುವ ಮೂಲಕ ಜನರೇ ನಿಮಗೆ ಮತದ ಲಾಠಿ ಏಟು ನೀಡಲಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ವಕ್ತಾರ ರಾವೇಂದ್ರ ಕಿಣಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯೆ ವೀಣಾ ಶೆಟ್ಟಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರ್ಮೆ ಪ್ರವಿಣ್ಕುಮಾರ್, ರಾಜ್ಯ ಎಸ್ಟಿ ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್, ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾಧ್ಯಕ್ಷ ದಾವೂದ್ ಅಬೂಬಕ್ಕರ್ ಹಾಗೂ ವಿವಿಧ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಇದ್ದರು.