ಮಂಡ್ಯ: ಸರ್ಕಾರಿ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿಯ ಆಟಾಟೋಪಕ್ಕೆ ಬ್ರೇಕ್ ಹಾಕಲು ಜಿಲ್ಲಾಧಿಕಾರಿ ಡಾ.ಕುಮಾರ ಮುಂದಾಗಿದ್ದಾರೆ. ಅದರಂತೆ ಇಲಾಖೆಗಳಲ್ಲಿ ಶಿಸ್ತಿನಿಂದ ಇರುವುದರ ಜತೆಗೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.
ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಕೆಲ ಅಧಿಕಾರಿ, ಸಿಬ್ಬಂದಿ ಸುಖಾಸುಮ್ಮನೆ ಹೊರಗೆ ತಿರುಗಾಡುವುದು ಹಾಗೂ ಟೀ, ಕಾಫಿ ಕುಡಿಯುವ ನೆಪದಲ್ಲಿ ಕಾಲಹರಣ ಮಾಡುವುದು. ಜತೆಗೆ ಇಷ್ಟಬಂದಾಗ ಬರುವುದು, ಹೋಗುತ್ತಾರೆನ್ನುವ ಆರೋಪ ಹಿಂದಿನಿಂದಲೂ ಇದೆ. ಆದರೆ ಇದುವರೆಗೂ ಇಂತಹವುದಕ್ಕೆ ಕಡಿವಾಣ ಹಾಕುವ ಕೆಲಸವಾಗಿರಲಿಲ್ಲ. ಇದೀಗ ಜಿಲ್ಲಾಧಿಕಾರಿ ಅಂತಹ ಅಧಿಕಾರಿ, ಸಿಬ್ಬಂದಿಗೆ ಮೂಗುಧಾರ ಹಾಕುವ ಕೆಲಸ ಮಾಡಿದ್ದಾರೆ.
ಸಮಯ ಪಾಲನೆ ಕಡ್ಡಾಯ: ಅಧಿಕಾರಿ, ಸಿಬ್ಬಂದಿ ವಿಚಾರದಲ್ಲಿ ಗಂಭೀರವಾಗಿ ಕೇಳಿಬರುವ ಆರೋಪ ಸಮಯಪಾಲನೆ ಮಾಡದಿರುವುದು. ಎಲ್ಲ ಇಲಾಖೆಯಲ್ಲಿಯೂ ಕೆಲ ಅಧಿಕಾರಿ, ಸಿಬ್ಬಂದಿ ಇದನ್ನು ರೂಢಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಕ್ಕೆ ಬಂದು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಈ ಬಗ್ಗೆ ಪ್ರಶ್ನಿಸಿದರೆ ಮೀಟಿಂಗ್‌ಗೆ ಹೋಗಿದ್ದಾರೆ, ಕೆಲಸದ ಮೇಲೆ ಹೊರಗೆ ಹೋಗಿದ್ದಾರೆನ್ನುವ ಸಿದ್ಧ ಉತ್ತರ ಸಿಗುತ್ತದೆ.
ಈ ಹಿನ್ನೆಲೆಯಲ್ಲಿ ಆಡಳಿತ ವರ್ಗವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸುಧಾರಣಾ ಕ್ರಮ ಜಾರಿಗೊಳಿಸುವ ಕೆಲಸವನ್ನು ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕಚೇರಿಯ ನಿಗದಿತ ಅವಧಿಯಲ್ಲಿ ಸಮಯ ಪ್ರಜ್ಞೆ ಪಾಲನೆ ಮಾಡುವುದು ಕಡ್ಡಾಯ. ಒಂದು ವೇಳೆ ಉಲ್ಲಂಘಿಸಿದರೆ ಲಿಖಿತ ರೂಪದಲ್ಲಿ ಎಚ್ಚರಿಕೆ ನೀಡುವ ಹೊಣೆಯನ್ನು ಇಲಾಖೆ ಮುಖ್ಯಸ್ಥರಿಗೆ ನೀಡಲಾಗಿದೆ. ವಿಶೇಷವೆಂದರೆ ಕರ್ತವ್ಯದ ವೇಳೆಯಲ್ಲಿ ಟೀ/ಕಾಫಿಗೆಂದು ಸಿಬ್ಬಂದಿ ವರ್ಗ ಕಚೇರಿಯಿಂದ ಹೊರಗಡೆ ಹೋಗದಂತೆ ನಿರ್ಬಂಧಿಸಲಾಗಿದೆ. ಮಾತ್ರವಲ್ಲದೆ ಪ್ರತಿ ಕಚೇರಿಯಲ್ಲಿಯೂ ಚಲನ-ವಲನ ವಹಿ ನಿರ್ವಹಿಸಿ ಸಿಬ್ಬಂದ ವರ್ಗದ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.
ಸೂಚನೆ ಪಾಲನೆ ಮಾಡುವ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳು, ಉಪವಿಭಾಗಾಧಿಕಾರಿ, ತಹಸೀಲ್ದಾರ್, ಕಚೇರಿ ಸಹಾಯಕರು ಹಾಗೂ ಶಾಖಾ ಮುಖ್ಯಸ್ಥರಿಗೆ ಆದೇಶ ನೀಡಲಾಗಿದೆ. ಜಿಲ್ಲಾಧಿಕಾರಿಯ ಆದೇಶ ಯಥಾವತ್ತಾಗಿ ಪಾಲನೆಯಾದರೆ ಮಂಡ್ಯ ಜಿಲ್ಲೆ ರಾಜ್ಯದಲ್ಲಿಯೇ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ. ಆದರೂ ಡಿಸಿ ಸೂಚನೆಗೆ ಅಧಿಕಾರಿ, ಸಿಬ್ಬಂದಿಯ ಸ್ಪಂದನೆ ಮುಂದಿನ ದಿನದಲ್ಲಿ ಯಾವ ರೀತಿ ಇರಲಿದೆ ಹಾಗೂ ಏನೆಲ್ಲ ಬದಲಾವಣೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಬಯೋಮೆಟ್ರಿಕ್ ಅಳವಡಿಕೆ: ಎಲ್ಲ ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಪದ್ಧತಿಯನ್ನು ಅಳವಡಿಸಬೇಕು. ಮಾತ್ರವಲ್ಲದೆ ಕಚೇರಿಯ ಮುಖ್ಯಸ್ಥರು ಪ್ರತಿ ವಾರಕ್ಕೊಮ್ಮೆ ಹಾಜರಾತಿಯನ್ನು ಪರಿಶೀಲನೆ ಮಾಡಬೇಕಿದೆ. ಮಾತ್ರವಲ್ಲದೆ ಶಾಖೆಗಳಿಗೂ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಇದರೊಟ್ಟಿಗೆ ಅಧಿಕಾರಿ, ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಇಲಾಖೆಯಿಂದ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕು. ಅಂತೆಯೇ ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅಧಿಕಾರಿ, ಸಿಬ್ಬಂದಿ ಹೆಸರು, ಪದನಾಮ ಸೂಚಿಸುವ ನಾಮಫಲಕ ಅಳವಡಿಸುವುದು ಕಡ್ಡಾಯ ಮಾಡಲಾಗಿದೆ.
ಅನಧಿಕೃತವಾಗಿ ವಾಹನ ಬಳಕೆಗೆ ನಿರ್ಬಂಧ: ಕೆಲ ಅಧಿಕಾರಿ, ಸಿಬ್ಬಂದಿ ಸರ್ಕಾರಿ ಕೆಲಸಕ್ಕೆಂದು ನೀಡಿರುವ ವಾಹನವನ್ನು ಅನಧಿಕೃತವಾಗಿ ಬಳಸುವ ಆರೋಪಗಳಿವೆ. ಅಂದರೆ ಕಚೇರಿ ಅವಧಿಯನ್ನು ಮೀರಿ ಬಳಕೆ ಮಾಡುತ್ತಿರುತ್ತಾರೆನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದಕ್ಕೂ ಈಗ ಬ್ರೇಕ್ ಬೀಳಲಿದೆ. ಇದರ ಬಗ್ಗೆಯೂ ಡಿಸಿ ಸೂಚನೆ ನೀಡಿದ್ದಾರೆ. ಅದರಂತೆ ಸರ್ಕಾರದ ಕೆಲಸಕ್ಕಾಗಿ ಒದಗಿಸಲಾಗಿರುವ ವಾಹನ ಹಾಗೂ ಹೊರಗುತ್ತಿಗೆ ಆಧಾರದ ವಾಹನ ಸೌಲಭ್ಯವನ್ನು ಪಡೆದುಕೊಂಡಿರುವ ಪ್ರತಿ ಕಚೇರಿಯಲ್ಲಿಯೂ ಕರ್ತವ್ಯ ಮುಗಿದ ಬಳಿಕ ನಿಗದಿತ ಪಾರ್ಕಿಂಗ್ ಸ್ಥಳದಲ್ಲಿಯೇ ವಾಹನ ನಿಲ್ಲಿಸುವ ವ್ಯವಸ್ಥೆಯನ್ನು ಮಾಡಬೇಕಿದೆ.
ಮಾತ್ರವಲ್ಲದೆ ಹೊರಗುತ್ತಿಗೆ ಆಧಾರದ ವಾಹನ ಸೌಲಭ್ಯ ಪಡೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಆ ವಾಹನದ ಮೇಲೆ ಅಧಿಕಾರಿಯ ಪದನಾಮ ಮತ್ತು ಸರ್ಕಾರದ ಉದ್ದೇಶಕ್ಕೆ ಎಂಬ ನಾಮಫಲಕವನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ.
ನಿಲ್ಲುತ್ತಾ ಅಪ್ ಆ್ಯಂಡ್ ಡೌನ್: ಮಂಡ್ಯ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಪ್ರತಿದಿನ ಬೆಂಗಳೂರು, ಮೈಸೂರಿಗೆ ಅಪ್ ಆ್ಯಂಡ್ ಡೌನ್ ಮಾಡುವ ಅಧಿಕಾರಿ ವರ್ಗವಿದೆ. ಈ ಸಂಬಂಧ ಹಿಂದೆಯೂ ಸಾಕಷ್ಟು ಬಾರಿ ಚರ್ಚೆ ನಡೆದಿದೆ. ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಸೂಚನೆ ನೀಡಿರುವುದರ ಹೊರತಾಗಿಯೂ ನಿರ್ಲಕ್ಷೃ ಮಾಡಲಾಗುತ್ತಿದೆ. ಇದೀಗ ಮತ್ತೆ ಅದೇ ಸೂಚನೆ ನೀಡಲಾಗಿದೆ. ಅದರಂತೆ ಕಚೇರಿಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ವಾಸವಿರುವಂತೆ ತಿಳಿಸಲಾಗಿದೆ. ಇನ್ನಾದರೂ ಅಪ್ ಆ್ಯಂಡ್ ಡೌನ್‌ಗೆ ಕಡಿವಾಣ ಬೀಳಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ: ಕಚೇರಿಗಳಲ್ಲಿ ಶಿಸ್ತನ್ನು ತರುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕುಮಾರ ಅವರು ತೆಗೆದುಕೊಂಡಿರುವ ಸುಧಾರಣಾ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದೇಶದಂತೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆನ್ನುವ ಸಲಹೆ ಕೇಳಿಬರುತ್ತಿದೆ.