ಮಂಡ್ಯ: ಮುಂಬೈನಿಂದ ಆಗಮಿಸುತ್ತಿರುವವರಲ್ಲಿ ಕರೊನಾ ಸೋಂಕು ಸ್ಫೋಟಿಸಿದ್ದರಿಂದ ಶನಿವಾರ ಮತ್ತೆ 28 ಜನರಿಗೆ ಪಾಸಿಟಿವ್ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ.
ಶನಿವಾರ ಮಧ್ಯಾಹ್ನ 1 ಗಂಟೆಗೆ ಬಿಡುಗಡೆಯಾದ ಬುಲೆಟಿನ್‌ನಲ್ಲಿ 28 ಜನರಿಗೆ ಸೋಂಕಿರುವುದು ಬಹಿರಂಗವಾಗಿದ್ದು, ಈ ಪೈಕಿ 13 ಮಹಿಳೆಯರು, 15 ಪುರುಷರು ಇದ್ದಾರೆ.
ಈ ಎಲ್ಲರೂ ಮುಂಬೈನ ಚೆರಿಮೆರಿ, ಟಾಟಾ ಪವರ್, ಸಂತಾಕ್ರೂಸ್, ಜಿವ ತಾಣಾ, ನೆಹರು ನಗರ, ಅಜಿಜ್ ಹೋಟೆಲ್ ಮುಂತಾದ ಕಡೆ ವಾಸವಿದ್ದು, ಬ್ಯಾಂಕ್, ವೈನ್‌ಶಾಪ್, ಎಲೆ ಅಂಗಡಿ, ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರ ಮಕ್ಕಳು ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮುಂಬೈನಲ್ಲಿ ಕರೊನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಇವರು ನಿಪ್ಪಾಣಿ, ಧಾರವಾಡ ಮೂಲಕ ಆನೆಗೊಳ ಚೆಕ್‌ಪೋಸ್ಟ್‌ಗೆ ಮೇ 13, 14 ಹಾಗೂ 15ರಂದು ವಿವಿಧ ವಾಹನಗಳ ಮೂಲಕ ಆಗಮಿಸಿದ್ದು, ಎಲ್ಲರನ್ನು ಅಲ್ಲಿ ತಡೆದು ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು.
ಶುಕ್ರವಾರ ಸಂಜೆ ಹಾಗೂ ಶನಿವಾರ ಬೆಳಗ್ಗೆ ಇಷ್ಟು ಜನರ ಫಲಿತಾಂಶದಲ್ಲಿ ಪಾಸಿಟಿವ್ ಬಂದಿದೆ. ಇವರಾರಿಗೂ ಸೋಂಕಿನ ಲಕ್ಷಣಗಳಿರಲಿಲ್ಲ. ಎಲ್ಲರನ್ನು ಮಿಮ್ಸ್ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಸೋಂಕಿತರಿವರು: ಪಿ.1796 ಮಹಿಳೆ-31, ಪಿ.1797 ಪುರುಷ-41, ಪಿ.1798 ಪುರುಷ-39, ಪಿ.1799 ಮಹಿಳೆ-39, ಪಿ.1800 ಪುರುಷ-28, ಪಿ.1801 ಬಾಲಕಿ-15, ಪಿ.1802 ಮಹಿಳೆ-35, ಪಿ.1803 ಬಾಲಕ-11, ಪಿ.1804 ಬಾಲಕ-11, ಪಿ.1805 ಬಾಲಕ-6, ಪಿ.1806 ಮಹಿಳೆ-33, ಪಿ.1807 ಬಾಲಕಿ-17.
ಪಿ.1914 ಮಹಿಳೆ-20, ಪಿ.1915 ಬಾಲಕ-2, ಪಿ.1916 ಪುರುಷ-45, ಪಿ.1917 ಪುರುಷ-30, ಪಿ.1918 ಮಹಿಳೆ-58, ಪಿ.1919 ಬಾಲಕಿ-15, ಪಿ.1920 ಪುರುಷ-45, ಪಿ.1921 ಮಹಿಳೆ-37, ಪಿ.1922 ಬಾಲಕ-13, ಪಿ.1923 ಪುರುಷ-43, ಪಿ.1924 ಮಹಿಳೆ-20, ಪಿ.1925 ಪುರುಷ-36, ಪಿ.1926 ಬಾಲಕಿ-16, ಪಿ.1927 ಪುರುಷ-33, ಪಿ.1928 ಮಹಿಳೆ-23, ಪಿ.1929 ಪುರುಷ-35.
ಕರೊನಾ ಸೇನಾನಿಗಳಿಗೆ ಕಿರುಕುಳ ಕೊಡಬೇಡಿ: ಕ್ವಾರಂಟೈನ್‌ನಲ್ಲಿರುವ ಕೆಲವರು ಅನಗತ್ಯವಾಗಿ ಕರೊನಾ ಸೇನಾನಿಗಳಿಗೆ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಇದು ಸರಿಯಲ್ಲ. ಸೇನಾನಿಗಳಿಗೆ ಸಹಕರಿಸಿ, ವಿಶ್ವಾಸ ತುಂಬುವ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮನವಿ ಮಾಡಿದ್ದಾರೆ.
ಕೆಲವರು ಕರೊನಾ ಸೇನಾನಿಗಳನ್ನು ಟೀಕಿಸುವುದು, ಮನಸ್ಸಿಗೆ ಬಂದಂತೆ ಮಾತನಾಡುವುದು, ಟಿಕ್‌ಟಾಕ್ ಮಾಡುವುದು, ಇತರ ವಿಡಿಯೋ ಮಾಡುವ ಮೂಲಕ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಕರೊನಾ ಸೇನಾನಿಗಳು ದಿನದ 24 ಗಂಟೆ ಜೀವದ ಹಂಗು ತೊರೆದು ನಿಮ್ಮ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಅವರಿಗೆ ಸಹಕಾರ ನೀಡುವುದು, ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಮಾಡಬೇಕು. ಮುಂಬೈನಿಂದ ಬರುತ್ತಿರುವವರನ್ನು ಕ್ವಾರಂಟೈನ್ ಮಾಡುತ್ತಿದ್ದು, ಅಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಕೆಲವರು ಉದ್ದೇಶ ಪೂರ್ವಕವಾಗಿ ತೊಂದರೆ ಮಾಡುತ್ತಿದ್ದಾರೆ.
ಸರ್ಕಾರದ ನಿರ್ದೇಶನದಂತೆ ನಾವು ಸೌಲಭ್ಯ ಕಲ್ಪಿಸಿದ್ದೇವೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು. ಆ ಮೂಲಕ ಕರೊನಾ ಸೋಂಕು ಹರಡದಂತೆ ಎಚ್ಚರವಹಿಸಬೇಕೆಂದು ಮನವಿ ಮಾಡಿದ್ದಾರೆ.
ಸದ್ಯ ಕರೊನಾ 2ನೇ ಸ್ಟೇಜ್‌ನಲ್ಲಿದೆ. ಅದು ಸಮಾಜಕ್ಕೆ ಹರಡದಂತೆ ಎಲ್ಲರೂ ಎಚ್ಚರ ವಹಿಸಬೇಕಿದೆ. ಆದ್ದರಿಂದ ಹೊರಗಿನಿಂದ ಬಂದವರನ್ನು ಕ್ವಾರಂಟೈನ್ ಮಾಡಿ 14 ದಿನಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗುತ್ತಿದೆ. ಜನರು ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು. ಪರಸ್ಪರ ಅಂತರ ಮರೆಯಬಾರದು.
ಡಾ.ಎಂ.ವಿ.ವೆಂಕಟೇಶ್ ಜಿಲ್ಲಾಧಿಕಾರಿ ಮಂಡ್ಯ