ಮಂಡ್ಯ: ನಗರದ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರಸಭೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ನಗರದಲ್ಲಿನ ಸಮಸ್ಯೆಗಳು ಹಾಗೂ ಸಾರ್ವಜನಿಕರಿಗೆ ನೀಡಬೇಕಾದ ಸೌಲಭ್ಯದ ಬಗ್ಗೆ ಸಮಗ್ರ ಮಾಹಿತಿ ಪಡೆದು ಕ್ರಮವಹಿಸಬೇಕು. ಸ್ವಚ್ಛತೆ, ಕುಡಿಯುವ ನೀರು, ಸಾರ್ವಜನಿಕ ಶೌಚಗೃಹ ಸೇರಿದಂತೆ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಬೇಕು. ರಸ್ತೆಗಳನ್ನು ಪ್ರತಿದಿನ ಸ್ವಚ್ಛಗೊಳಿಸುವುದು ನಗರಸಭೆ ಕರ್ತವ್ಯ. ಹಾಗಾಗಿ ನಗರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳಿ ಎಂದರು.
ಪೌರಕಾರ್ಮಿಕರ ಸ್ವಚ್ಛತೆ ಹಾಗೂ ಅವರಿಗೆ ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸಬೇಕು. ವಿವಿಧ ವಾರ್ಡ್‌ಗಳಲ್ಲಿ ಇರುವ ಸಮಸ್ಯೆಗಳನ್ನು ಆಲಿಸಿ ನಿವಾರಣೆಗೆ ಕ್ರಮವಹಿಸಬೇಕು. ರಸ್ತೆಗಳ ಬೀದಿದೀಪಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸ ಬೇಕು. ಉದ್ಯಾನಗಳಲ್ಲಿ ಕುಡಿಯುವ ನೀರು, ವಿದ್ಯುತ್, ಸಾರ್ವಜನಿಕ ಶೌಚಗೃಹ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ನಗರಸಭೆ ಆಯುಕ್ತ ಮಂಜುನಾಥ್, ಎಇಇ ರುದ್ರೇಗೌಡ ಇತರರಿದ್ದರು.