ಮಂಡ್ಯ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರಾದ ಕೆ.ಎಸ್.ಮಲ್ಲಿಕಾರ್ಜುನ್ ಹಾಗೂ ಎಂ.ಬಿ.ಬಸವರಾಜು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಆದೇಶಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎರಡು ವರ್ಷದಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದಲ್ಲದೆ, ಪಕ್ಷದ ಸೂಚನೆ ಧಿಕ್ಕರಿಸಿ ನಡೆದುಕೊಳ್ಳುವ ಮೂಲಕ ಘನತೆಗೆ ಕುಂದುಂಟು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರ ಆದೇಶದ ಮೇರೆಗೆ ಆರು ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್ ವಿರುದ್ಧ ಇತ್ತೀಚೆಗೆ ಪಕ್ಷದ ಕಚೇರಿ ಮುಂದೆ ಕೆಲ ಕಾರ್ಯಕರ್ತರೊಂದಿಗೆ ಕೆ.ಎಸ್.ಮಲ್ಲಿಕಾರ್ಜುನ್ ಮತ್ತು ಎಂ.ಬಿ.ಬಸವರಾಜು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಜಿಲ್ಲಾ ಸಮಿತಿಯಿಂದ ವರದಿ ಪಡೆದು ಶಿಸ್ತು ಕ್ರಮ ಕೈಗೊಂಡಿದ್ದಾರೆ. ಅಂತೆಯೆ ಮುಂದಿನ ದಿನಗಳಲ್ಲಿ ಪಕ್ಷ ವಿರೋಧಿಯಾಗಿ ನಡೆದುಕೊಳ್ಳದಂತೆ ಕಾರ್ಯಕರ್ತರು, ಮುಖಂಡರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.