ಜಿಲ್ಲೆ

ಆದಾಯ ದ್ವಿಗುಣಗೊಳಿಸಲು ಎ್ಪಿಒ ನೆರವು: ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಹೇಳಿಕೆ

ಮಂಡ್ಯ: ರಾಸಾಯನಿಕ ಮುಕ್ತ ಮತ್ತು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುವುದರ ಜತೆಗೆ ಅವುಗಳನ್ನು ಕೊಂಡುಕೊಳ್ಳಲು ಮಾರುಕಟ್ಟೆಗಳನ್ನು ನಿರ್ಮಾಣ ಮಾಡುವುದರೊಂದಿಗೆ ರೈತರ ಆದಾಯ ದ್ವಿಗುಣಗೊಳಿಸಲು ರೈತ ಉತ್ಪಾದಕ ಕಂಪನಿಗಳು(ಎ್ಪಿಒ) ಆರಂಭಿಸಲಾಯಿತು ಎಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಆವರಣದ ಎಚ್.ಹೊನ್ನಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಸಾಯನಿಕ ಗೊಬ್ಬರಗಳನ್ನು ಅತಿಯಾಗಿ ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡಿದ್ದೇವೆ. ಅತಿಯಾದ ರಾಸಾಯನಿಕ ಬಳಕೆ ಹಾಗೂ ಅಸಮರ್ಪಕ ನೀರಿನ ನಿರ್ವಹಣೆಯಿಂದಾಗಿ ಇಳುವರಿ ಕಡಿಮೆಯಾಗಿ ಪ್ರತಿ ವರ್ಷ 700 ಕೋಟಿ ರೂಗೂ ಹೆಚ್ಚು ಹಣ ಜಿಲ್ಲೆಯಲ್ಲಿ ನಷ್ಟವಾಗುತ್ತಿದೆ. ಇದರಿಂದ ರೈತ ಬಾಂಧವರು ಜಾಗೃತಿಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಂಡ್ಯ ಬೆಲ್ಲಾ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಕಾರಸವಾಡಿ ಮಹದೇವ ಮಾತನಾಡಿ, ಕಂಪನಿ ಮೂರು ವರ್ಷದ ಹಿಂದೆ 300 ಜನರಿಂದ ಆರಂಭವಾಗಿ ಇಂದು 1,000 ಜನ ಷೇರುದಾರರನ್ನು ಹೊಂದಿದೆ. ಜಿಲ್ಲೆಯ ಹಾಗೂ ರಾಜ್ಯದ ಜನ ಸಮುದಾಯಕ್ಕೆ ರಾಸಾಯನಿಕ ಮುಕ್ತ ಹಾಗೂ ಸಾವಯವ ಬೆಲ್ಲವನ್ನು ಕೀರೆಮಡಿ ಎಂಬ ಬ್ರ್ಯಾಂಡ್‌ನಡಿ ಉಣಬಡಿಸುವ ಕಾಯಕದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ದುಡಿಯುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಕಂಪನಿಯ ಮಾರುಕಟ್ಟೆಯನ್ನು ರಾಜ್ಯ, ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೂ ಕೂಡ ವಿಸ್ತರಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ವಿಕಸನ ಸಂಸ್ಥೆಯ ಜಿಲ್ಲಾ ಸಂಯೋಜಕ ಕೆಂಪಯ್ಯ, ಆಡಿಟರ್ ಗಿರೀಶ್, ನಿರ್ದೇಶಕರಾದ ಧನಂಜಯ, ಪ್ರಕಾಶ್, ಕೃಷ್ಣಪ್ಪ, ಪಾಪಣ್ಣ, ಪ್ರಕಾಶ್, ತಮ್ಮಯ್ಯ, ಬೈರಾಜು, ಸಾಕಮ್ಮ, ಎಚ್.ಕೃಷ್ಣ ಇತರರಿದ್ದರು. ಇದೇ ಸಂದರ್ಭದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಕಬ್ಬನ್ನು ಬೆಳೆಯುತ್ತಿರುವ ಕೃಷಿಕರನ್ನು ಸನ್ಮಾನಿಸಲಾಯಿತು. ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕರ ನೀಡಿ ಗೌರವಿಸಲಾಯಿತು. 25 ಜನ ಷೇರುದಾರರಿಗಾಗಿ ವಿಶೇಷವಾಗಿ ರಿಯಾಯಿತಿ ದರದ ದಿನಸಿ ಕಿಟ್ ವಿತರಿಸಲಾಯಿತು.