ಮಂಡ್ಯ: ಗ್ರಾಮೀಣ ಭಾಗದ ಜನರ ಜೀವನೋಪಯ ಮಾರ್ಗಕ್ಕೆ ವರದಾನವಾಗಿರುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯ 2024-25ನೇ ಸಾಲಿನಲ್ಲಿ ಮಾನವ ದಿನ ಸೃಜನೆಯಲ್ಲಿ ಜಿಲ್ಲಾ ಪಂಚಾಯಿತಿ ಉತ್ತಮ ಸಾಧನೆ ಮಾಡಿದೆ. ಅಂದರೆ ಶೇ.102ರಷ್ಟು ಗುರಿ ತಲುಪುವ ಮೂಲಕ ನಿಗದಿಗಿಂತ ಹೆಚ್ಚಿನ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,44,904 ಲಕ್ಷ ಕುಟುಂಬಕ್ಕೆ ಉದ್ಯೋಗ ಚೀಟಿ ವಿತರಿಸಲಾಗಿದೆ. ಇದರಲ್ಲಿ 1,46,039 ಕುಟುಂಬದ ಉದ್ಯೋಗ ಚೀಟಿ ಮಾತ್ರ ಸಕ್ರಿಯವಾಗಿದೆ. ಅಂತೆಯೇ 2,58,697 ಫಲಾನುಭವಿಗಳು ಯೋಜನೆ ಪ್ರಯೋಜನ ಪಡೆದುಕೊಂಡಿದ್ದಾರೆ. ಕೆ.ಆರ್.ಪೇಟೆ ತಾಲೂಕಿಗೆ ಮೊದಲ ಸ್ಥಾನ: ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಒಟ್ಟು 27 ಲಕ್ಷ ಮಾನವ ದಿನಗಳ ಗುರಿ ನಿಗದಿ ಮಾಡಲಾಗಿತ್ತು. ಇದರಲ್ಲಿ ಜಿಲ್ಲೆ 27,69,096 ಮಾನವ ದಿನ ಸೃಜನೆ ಮಾಡಲಾಗಿದೆ. ಇದರೊಂದಿಗೆ ಶೇ.102.55 ರಷ್ಟು ಗುರಿ ಸಾಧಿಸಿದೆ. ಇನ್ನು ತಾಲೂಕುವಾರು ಅಂಕಿ ಅಂಶ ಗಮನಿಸಿದರೆ ಕೆ.ಆರ್.ಪೇಟೆ ಅತಿ ಹೆಚ್ಚು ಅಂದರೆ ಶೇ.144.55 ರಷ್ಟು ಗುರಿ ಸಾಧನೆ ಮಾಡಿದೆ. ಇದರೊಂದಿಗೆ ನಿಗದಿತ ಸಂಖ್ಯೆಗಿಂತಲೂ ಮೀರಿದ ಯಶಸ್ಸು ತಲುಪಿದೆ. ಈ ತಾಲೂಕಿನಲ್ಲಿ ಒಟ್ಟು 5,28,538 ಮಾನವ ದಿನ ಸೃಜನೆ ಗುರಿ ಹೊಂದಲಾಗಿದ್ದು, ಈ ಪೈಕಿ 7,64,005 ಮಾನವ ದಿನ ಸೃಜಿಸಿ ವಿಶೇಷ ದಾಖಲೆ ಬರೆದಿದೆ. ಇನ್ನು ಮದ್ದೂರು ತಾಲೂಕಿನ 6,49,083 ಮಾನವ ದಿನ ಗುರಿಯಲ್ಲಿ 6,89,083 ಪೂರೈಸಿ ಶೇ.106.63 ರಷ್ಟು ಸಾಧನೆ ಮಾಡಿದೆ. ಈ ತಾಲೂಕು ಕೂಡ ನಿಗದಿತ ಗುರಿಯನ್ನು ದಾಟಿದೆ. ಇನ್ನೂ ಉಳಿದಂತೆ ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ ಹಾಗೂ ಪಾಂಡವಪುರ ತಾಲೂಕಿನಲ್ಲಿ ಶೇ.70 ರಿಂದ 90ರಷ್ಟು ಮಾನವ ದಿನ ಸೃಜಿಸಲಾಗಿದೆ. ಈ ಮೂಲಕ ಮನರೇಗಾ ಯೋಜನೆಯಡಿ ಉದ್ಯೋಗ ನೀಡಿ ಜನರ ವಲಸೆ ತಪ್ಪಿಸಿ ಗ್ರಾಮೀಣ ಜನರ ಸಬಲೀಕರಣಕ್ಕೆ ಸಾಕ್ಷಿಯಾಗಿದೆ. ಕ್ರಿಯಾ ಯೋಜನೆ: ನರೇಗಾ ಯೋಜನೆಗೆ ಸಂಬಂಧಿಸಿದಂತೆ 2025-26ನೇ ಸಾಲಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಗಮನಾರ್ಹ ವಿಷಯವೆಂದರೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಭಾಗಕ್ಕೆ ಹಾಗೂ ಜನರ ಅನುಕೂಲವಾಗುವಂತಹ ಕಾಮಗಾರಿ ಮಾಡಲು ಅನುಮೋದಿಸಲಾಗಿದೆ. ಅಂತೆಯೇ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೂಲಿ ಮೊತ್ತ ಹೆಚ್ಚಳ: ನರೇಗಾ ಯೋಜನೆಯಡಿ ಆಯಾ ರಾಜ್ಯಗಳಿಗೆ ಅನುಗುಣವಾಗಿ ಕೂಲಿಯನ್ನು ನಿಗದಿ ಮಾಡಲಾಗಿದೆ. ಈ ನಡುವೆ ಉತ್ತಮ ಬೆಳವಣಿಗೆ ಎಂದರೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಮೊತ್ತವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರನ್ವಯ ಕರ್ನಾಟಕದಲ್ಲಿ 2024-25 ನೇ ಸಾಲಿನಲ್ಲಿ 349 ರೂಗಳಿಂದ ಕೂಲಿ ಮೊತ್ತವನ್ನು 2025-26 ನೇ ಸಾಲಿನಲ್ಲಿ 370 ರೂಗಳಿಗೆ ಹೆಚ್ಚಳ ಮಾಡಲಾಗಿದೆ. ಅದರಂತೆ ಏ.1ರಿಂದಲೇ 370 ರೂ.ಗಳ ಕೂಲಿಯನ್ನು ಜಾರಿಗೆ ತರಲಾಗಿದೆ. ಕುಂದುಕೊರತೆ ನಿವಾರಣೆಗೆ ಸಹಾಯವಾಣಿ: ಮಹಾತ್ಮ ಗಾಂಧಿ ನರೇಗಾ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಗಳ ಮಾಹಿತಿ ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ ಏಕೀಕೃತ ಸಹಾಯವಾಣಿಯನ್ನು ಪ್ರಾರಂಭ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಮಾಹಿತಿ ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ ಮೊ.ಸಂ 8277506000 ಕರೆ ಮಾಡಲು ಅವಕಾಶ ನೀಡಲಾಗಿದೆ.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಒಳಗೊಂಡಂತೆ 2024-25ನೇ ಸಾಲಿನಲ್ಲಿ ವಾರ್ಷಿಕ ಗುರಿ ಮೀರಿ ಜಿಲ್ಲೆ ಶೇ.102ರಷ್ಟು ಮಾನವ ದಿನ ಸೃಜನೆ ಮಾಡಿ ಪ್ರಗತಿ ಸಾಧಿಸಿದೆ. ಮನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರ ಬದುಕಿಗೆ ಆಶಾಕಿರಣವಾಗಿದೆ. ಇದಕ್ಕೆ ಪೂರಕವಾಗಿ ಏ.1ರಿಂದ ಕೂಲಿ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಆದ್ದರಿಂದ ಕೂಲಿಕಾರರು ನಿರಂತರವಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಕೆ.ಆರ್.ನಂದಿನಿ ಜಿಪಂ ಸಿಇಒ