ಮಂದಾರ್ತಿ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ವರ್ಷಂಪ್ರತಿ ನಡೆಯುವ ಬೆಳಕಿನ ಸೇವೆಯಾಟಕ್ಕೆ ಶುಕ್ರವಾರ ಚಾಲನೆ ದೊರೆತಿದೆ. ಕರೊನಾ ಮಹಾಮಾರಿಯಿಂದಾಗಿ ಈ ಬಾರಿ ಐದು ಮೇಳಗಳು ಒಂದು ತಿಂಗಳ ನಂತರ ಸೇವೆಗೆ ಸಿದ್ಧವಾಗಿವೆ. ಆ ಪ್ರಯುಕ್ತ ಬಾರಾಳಿ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗಣಹೋಮ, ಮಧ್ಯಾಹ್ನ ಕ್ಷೇತ್ರದಲ್ಲಿ ಗಣಹೋಮ ಐದು ಮೇಳಗಳ ಮಹಾಗಣಪತಿ ದೇವರಿಗೆ ಅರ್ಚಕ ಎಂ.ಶ್ರೀಪತಿ ಅಡಿಗ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಐದು ಮೇಳಗಳ ಭಾಗವತರಿಗೆ ತಾಳ ಹಸ್ತಾಂತರಿಸಲಾಯಿತು.
ದೇವಳದ ಕಾರ್ಯ ನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ, ಆನುವಂಶಿಕ ಮೊಕ್ತೇಸರರಾದ ಎಚ್.ಧನಂಜಯ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಎಚ್.ಪ್ರಭಾಕರ ಶೆಟ್ಟಿ, ಎಚ್.ಶಂಭುಶೆಟ್ಟಿ, ಆರ್.ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ಸ್ಥಳವಂದಿಗರು, ದೇವಳದ ಅರ್ಚಕ ವೃಂದ, ಸಿಬ್ಬಂದಿ ವರ್ಗ ಮತ್ತು ಐದು ಮೇಳಗಳ ಕಲಾವಿದರು, ಭಕ್ತರು ಉಪಸ್ಥಿತರಿದ್ದರು.