ಜಿಲ್ಲೆ

ಸಮೀಕ್ಷೆಯಲ್ಲಿ ಮಾದಿಗ ಎಂದು ಕಡ್ಡಾಯವಾಗಿ ನಮೂದಿಸಿ

ಮುಳಬಾಗಿಲು: ಮೇ 5 ರಿಂದ 15ರವರೆಗೂ ಮನೆಮನೆಗೂ ಜಾತಿ ಸಮೀಕ್ಷೆ ನಡೆಯಲಿದ್ದು, ಮಾದಿಗ ಸಮುದಾಯದವರು ಮಾದಿಗ ಎಂದು ನಮೂದಿಸಬೇಕು ಎಂದು ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಸಾಹುಕಾರ್​ ಶಂಕರಪ್ಪ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯದವರು ಮಾದಿಗ ಎಂದು ಹೊಲೆಯ ಸಮುದಾಯದವರು ಹೊಲೆಯ ಎಂದು ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕೆಂದು ಸಲಹೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ಪಡೆಯಲು ಮತ್ತು ಶಿಕ್ಷಣ, ರಾಜಕೀಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಮೀಸಲಾತಿ ಪಡೆಯಲು ಜಾತಿ ಜನಗಣತಿ ಅನುಕೂಲವಾಗಿದೆ ಎಂದರು.

ಮಾದಿಗ ದಂಡೋರ ರಾಜ್ಯ ಕಾನೂನು ಸಲಹೆಗಾರ ಹಾರೋಹಳ್ಳಿ ವೆಂಕಟೇಶ್​ ಮಾತನಾಡಿ, ಮಾದಿಗ ಸಮುದಾಯ ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಈ ಬಾರಿ ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಜಾತಿ ಜನಗಣತಿಯಲ್ಲಿ ಮಾದಿಗ ಸಮುದಾಯ ಎಂದು ಕಡ್ಡಾಯವಾಗಿ ನಮೂದಿಸಬೇಕು. ಅಲ್ಲದೆ ಸಮುದಾಯದ ಮುಖಂಡರು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸಮುದಾಯದ ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮುಳ್ಳಳ್ಳಿ ವೆಂಕಟಸ್ವಾಮಿ, ಕಾರ್ಯದರ್ಶಿ ಹೂವಳ್ಳಿ ಕೃಷ್ಣಪ್ಪ, ಸಮುದಾಯದ ಮುಖಂಡರಾದ ಕಗ್ಗನಹಳ್ಳಿ ಶ್ರೀನಿವಾಸ್​, ಮುನಿಗಂಗಯ್ಯ, ನಾಗರಾಜ್​, ಅಂಗಳ ನಾರಾಯಣಸ್ವಾಮಿ, ವೇಣು ಕುಮಾರ್​, ಅಂಬೇಡ್ಕರ್​ನಗರ ರಮೇಶ್​, ಶ್ರೀನಿವಾಸಪುರ ಗುರುಮೂರ್ತಿ, ಮೋತಕಪಲ್ಲಿ ಚಲಪತಿ, ಸತೀಶ್​, ದೇವಾನಂದ್​ ಇದ್ದರು.