ಮದ್ದೂರು: ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ತಿಬ್ಬಾದೇವಿ ದೇವಸ್ಥಾನದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನೆರವೇರಿತು.
ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶ್ರೀ ತಿಬ್ಬಾದೇವಿ ಅಮ್ಮನವರ ದೇವಸ್ಥಾನವನ್ನು ಗ್ರಾಮಸ್ಥರು, ದಾನಿಗಳ ನೆರವಿನಿಂದ ಜೀರ್ಣೋದ್ಧ್ದಾರಗೊಳಿಸಿ ಫೆ.4 ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದ್ದರು. ಅಂದಿನಿಂದ ಇಂದಿನ ವರೆಗೆ ಒಟ್ಟು 48 ದಿನಗಳು ದೇವಸ್ಥಾನದಲ್ಲಿ ನಿರಂತರವಾಗಿ ಪ್ರತಿದಿನ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಮಾಡಿಕೊಂಡು ಬರಲಾಗಿತ್ತು ಎಂದರು.
ಮಂಡಲ ಪೂಜೆಯ ಅಂಗವಾಗಿ ಭಾನುವಾರ ಬೆಳಗ್ಗೆ ದೇವಿಯವರ ವಿಗ್ರಹಕ್ಕೆ ಅಭಿಷೇಕ, ಮಹಾಮಂಗಳಾರತಿ ನಡೆಸಲಾಯಿತು. ಪ್ರಸಾದ ವಿನಿಯೋಗ, ಗಣಪತಿ ಹಾಗೂ ದುರ್ಗಾ ಹೋಮಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ದೇವಸ್ಥಾನದ ಮುಂದೆ ಭಕ್ತಿ ಗೀತೆ ಕಾರ್ಯಕ್ರಮವು ಆಯೋಜಿಸಲಾಗಿತ್ತು. ಬಳಿಕ ಅನ್ನಸಂತರ್ಪಣೆ ಮಾಡಲಾಯಿತು. ಗ್ರಾಮ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್, ಕಾರ್ಯದರ್ಶಿ ರಾಮಣ್ಣ, ಸಹ ಕಾರ್ಯದರ್ಶಿ ಟಿ.ಶ್ರೀನಿವಾಸ್, ಗೌರವಾಧ್ಯಕ್ಷ ಚನ್ನೇಗೌಡ, ಟ್ರಸ್ಟಿಗಳಾದ ಪ್ರಕಾಶ್, ಮರೀಗೌಡ, ನಾಗಣ್ಣ, ದಾಸೇಗೌಡ, ಪದಾಧಿಕಾರಿಗಳು ಇದ್ದರು.