ಜಿಲ್ಲೆ

ಮಾಣಾಯಿ ಮಠದಲ್ಲಿ ರಾಮಭದ್ರಕ ಪೂಜೆ

ಉಡುಪಿ: ಹಿರಿಯಡಕ ಸಮೀಪದ ಮಾಣಾಯಿ ಪ್ರಾಚೀನ ಮುಖ್ಯಪ್ರಾಣದೇವರ ಮಠದಲ್ಲಿ ಅಕ್ಷಯ ತೃತೀಯಾ ಪರ್ವದಿನ ಭಾನುವಾರ ಅತ್ಯಂತ ವಿಶೇಷ ಫಲಪ್ರದ ರಾಮಭದ್ರಕ ಪೂಜೆ ನಡೆಯಿತು.

ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ನಡೆದ ಈ ವಿಶೇಷ ಪೂಜೆಯಲ್ಲಿ ತಲಾ ಹದಿನಾರು ಬಾರಿ ಶ್ರೀರಾಮನ ಹೆಸರನ್ನು ಸಂಸ್ಕೃತ ಭಾಷೆಯಲ್ಲಿ ಮತ್ತು ರುದ್ರದೇವರ ಲಿಂಗವನ್ನು ಚಿತ್ರಿಸಿ, ರಾಮಭದ್ರಕ ಮಂಡಲದಲ್ಲಿ ರಾಮಚಂದ್ರದೇವರನ್ನು ಮೂರು ಹೊತ್ತು ವಿಧಿಪೂರ್ವಕವಾಗಿ ಅರ್ಚಿಸಿ, ಪೂಜಿಸಲಾಯಿತು.

ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಗುರುಪೂಜೆ ಸ್ವೀಕರಿಸಿ, ಅಕ್ಷಯ ತದಿಗೆಯ ಪರ್ವದಿನ ರಾಮದಾಸ ಹನುಮನ ಸನ್ನಿಧಿಯಲ್ಲಿ ನಡೆಸಿದ ಈ ಸತ್ಕರ್ಮದ ಫಲ ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರವನ್ನಾಗಿಸಲು ಶ್ರಮಿಸುತ್ತಿರುವ ಪ್ರಧಾನಿ ಸಹಿತ ಎಲ್ಲರಿಗೂ ಅಕ್ಷಯವಾಗಿ ದೊರೆಯಲಿ ಎಂದು ಅನುಗ್ರಹ ಸಂದೇಶ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮತ್ತು ಪೂರ್ಣಿಮಾ ನಾಯಕ್ ದಂಪತಿ ಸಂಕಲ್ಪ ನೆರವೇರಿಸಿದರು. ಶಾಸಕ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಅಭ್ಯರ್ಥಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಎ. ಸುವರ್ಣ , ಸಂಘದ ಹಿರಿಯರಾದ ಟಿ. ಶಂಭು ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ವಿದ್ವಾನ್ ಹೆರ್ಗ ಹರಿಪ್ರಸಾದ್ ಭಟ್ಟರ ನೇತೃತ್ವದಲ್ಲಿ ವೈದಿಕ ವಿದ್ವಾಂಸರಾದ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಹೆರ್ಗ ರವೀಂದ್ರ ಭಟ್, ಮಠದ ಪ್ರಧಾನ ಅರ್ಚಕ ಮಾಧವ ಉಪಾಧ್ಯಾಯ ಧಾರ್ಮಿಕ ವಿಧಾನ ನೆರವೇರಿಸಿದರು.