ಮಂಡ್ಯ: ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹಾಗೂ ಕೆಎಸ್‌ಆರ್‌ಟಿಸಿ(ಮಂಡ್ಯ ವಿಭಾಗ)ದ ಸಹಾಯಕ ಸಂಚಾರ ವ್ಯವಸ್ಥಾಪಕಿ ಪುಷ್ಪಲತಾ ಅವರಿಗೆ ತಾಲೂಕಿನ ರಾಗಿಮುದ್ದನಹಳ್ಳಿ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿದರು.
ಬಸ್ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಹಲವು ಸಮಸ್ಯೆ ಎದುರಾಗಿದೆ. ಆದ್ದರಿಂದ ತಕ್ಷಣ ಹಳ್ಳಿಗಳಿಗೆ ಬಸ್ ಸೌಕರ್ಯ ಕಲ್ಪಿಸಿಕೊಡಬೇಕು. ರಾಗಿಮುದ್ದನಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಒಂದೂವರೆ ಕಿ.ಮೀ ವರೆಗೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿ ನಡೆದುಕೊಂಡು ಬಂದು ಬಸ್ ಅಥವಾ ಇತರೆ ವಾಹನಗಳಲ್ಲಿ ತೆರಳುತ್ತಿದ್ದರು. ಆದರೆ, ಹೆದ್ದಾರಿಯಲ್ಲಿ ಮುಳ್ಳುತಂತಿಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿ ಬಂದ್ ಮಾಡಿರುವ ಹಿನ್ನಲೆಯಲ್ಲಿ ರಸ್ತೆ ದಾಟುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಬಸ್ ಸಂಪರ್ಕ ಕಳೆದುಕೊಂಡು ಹಲವು ವರ್ಷ ಕಳೆದಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನವೂ ಆಗಿಲ್ಲ. ಅಲ್ಲದೇ ದಿನನಿತ್ಯ ಮಂಡ್ಯ ನಗರಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ತೀರಾ ಅನಾನುಕೂಲವಾಗಿದೆ. ಅಂಗವಿಕಲರು, ವಯೋವೃದ್ಧರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಬರುವುದಕ್ಕೆ ಹೈರಾಣ ಪಡುತ್ತಿದ್ದಾರೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆ ಬಗೆಹರಿಸಿಕೊಡಬೇಕ ಎಂದು ಒತ್ತಾಯಿಸಿದರು.
ಪ್ರಸ್ತುತದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿರುವ ಕಾರಣ ಸ್ವಗ್ರಾಮಕ್ಕೆ ತೆರಳುವುದೇ ಕಷ್ಟವಾಗಿದೆ. ಬಸ್ ಸೌಕರ್ಯ ಅವಲಂಬಿತರು ಹೈರಾಣಾಗಿದ್ದಾರೆ. ಏಕೆಂದರೆ ರಸ್ತೆ ದಾಟುವಾಗ ಅಪಘಾತ ಸಂಭವಿಸಿ ಸಾವು ನೋವುಗಳು ಸಂಭವಿಸಿವೆ. ಆದ್ದರಿಂದ ಅತಿ ಮುಖ್ಯವಾಗಿರುವುದರಿಂದ ಬಸ್ ಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ವಿವಿಧ ಸಂಘಟನೆಯ ಮುಖಂಡರಾದ ಎಲ್.ಸಂದೇಶ್, ಹನಕೆರೆ ಅಭಿ, ಆಡಿಟರ್ ಶಂಕರ್, ಗ್ರಾಮಸ್ಥರಾದ ಕಿರಣ್, ಕೃಷ್ಣೇಗೌಡ, ಅರ್ಜುನ್, ವೀರೇಂದ್ರ, ಪುರುಷೋತ್ತಮ್, ಪ್ರಸನ್ನ, ಪವನ್, ಸೋಮೇಶ್, ಕರಣ್ ಇದ್ದರು.