ಜಿಲ್ಲೆ

ಪುತ್ತೂರಿಗೆ ಆಯರ್ವೇದ ಕಾಲೇಜು ಮಂಜೂರು ಮಾಡಲು ಮನವಿ

Mangaluru - Nishantha Narayana

ಪುತ್ತೂರು: ಪುತ್ತೂರು ತಾಲೂಕಿಗೆ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಗೆ ಮಂಜೂರಾತಿ ನೀಡಬೇಕೆಂದು ಬೆಂಗಳೂರು ಶ್ರೀ ಅಖಿಲ ಹವ್ಯಕ ಮಹಾಸಭಾ ಪುತ್ತೂರು ಶಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಪ್ರತಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈಗೆ ನೀಡಿದ್ದಾರೆ.

ದ.ಕ ಜಿಲ್ಲೆ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿಯಾಗಿದ್ದು, ಉತ್ತಮ ಗುಣಮಟ್ಟದ ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ಇಂಜಿನಿಯರಿಂಗ್ ಶಿಕ್ಷಣ ಲಭ್ಯವಿದೆ. ಆದರೆ ಈ ಭಾಗದಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಇಲ್ಲ. ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾದ ಆಯುರ್ವೇದ ಜಿಲ್ಲೆಯಲ್ಲಿ ಜನಪ್ರಿಯವಾಗಿದ್ದು, ವಿವಿಧ ರೋಗಗಳಿಗೆ ರೋಗಿಗಳು ಆಯುರ್ವೇದದ ಮೊರೆಹೋಗುತ್ತಿದ್ದಾರೆ. ಸದ್ಯ ಚಿಕಿತ್ಸೆಗಾಗಿ ಕೇರಳ ಭಾಗವನ್ನು ಆಶ್ರಯಿಸುವ ಪರಿಸ್ಥಿತಿಯಿದೆ.

ಆಯುರ್ವೇದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಸರ್ಕಾರಿ ಕಾಲೇಜಿನ ಲಭ್ಯತೆಯಿಲ್ಲದ ಕಾರಣದಿಂದ ರಾಜ್ಯದ ಹಾಗೂ ದೇಶದ ವಿವಿಧ ಕಡೆಗೆ ಹೋಗುವ ಸ್ಥಿತಿಯಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿದೆ. ಪುತ್ತೂರು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿದ್ದು, ಉಡುಪಿ, ಕೊಡಗು, ಕಾಸರಗೋಡು ಭಾಗಕ್ಕೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಜನಪರ ಕಾಳಜಿಯನ್ನಿಟ್ಟುಕೊಂಡು ಈ ಭಾಗಕ್ಕೆ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಬೋಧಕ ಆಸ್ಪತ್ರೆ ಪ್ರಾರಂಭ ಮಾಡಲು ಅನುಮತಿ ನೀಡಬೇಕೆಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.